National

ನಟಿ ಮತ್ತು ರೂಪದರ್ಶಿ ಶಹಾನಾ ಅನುಮಾನಾಸ್ಪದ ಸಾವು

ತಿರುವನಂತಪುರಂ: ನಟಿ ಮತ್ತು ರೂಪದರ್ಶಿ ಶಹಾನಾ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದು, ಶಹಾನಾ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ಶಹಾನಾಗೆ ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು.

ಕೇರಳದ ಕಾಸರಗೋಡು ಮೂಲದ ಶಹಾನಾ(20) ಪರಂಬಿಲ್ ಬಜಾರ್‌ನಲ್ಲಿರುವ ತಮ್ಮ ನಿವಾಸದ ಕಿಟಕಿಯ ಗ್ರಿಲ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಶಹಾನಾ ಪತಿ ಸಜ್ಜದ್‍ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಹಾನಾ ನಿವಾಸವು ಕೋಝಿಕ್ಕೋಡ್ ನಗರದಿಂದ ಸುಮಾರು 14 ಕಿಮೀ ದೂರದಲ್ಲಿದ್ದು, ಅದೇ ನಿವಾಸದಲ್ಲಿ ಶಹಾನಾ ಸಾವನ್ನಪ್ಪಿದ್ದಾರೆ.

ಶುಕ್ರವಾರ ಬೆಳಗಿನ ಜಾವ 1 ಗಂಟೆಗೆ ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ. ಈ ಹಿನ್ನೆಲೆ ನೆರೆಮನೆಯವರೆ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದಾರೆ. ಶಹಾನಾ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ.

 

Share Post