ಬೈಕ್ ಅಪಘಾತದಿಂದ ಬಯಲಾಯ್ತು ಕೊಲೆ ಕೇಸ್
ರಾಮನಗರ: ಮಹಿಳೆಯೊಬ್ಬರನ್ನು ಕೊಲೆ ಮಾಡಿ ಆಕೆಯ ಶವವನ್ನು ಬಿಸಾಡಲು ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತವಾಗಿದ್ದು, ಇದ್ರಿಂದ ಕೊಲೆಗಾರರು ಸಿಕ್ಕಿಬಿದ್ದಿದ್ದಾರೆ. ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಈ ವೇಳೆ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಿಗೆ ಬಂದಿದೆ.
ಬೆಂಗಳೂರು ಮೂಲದ ನಾಗರಾಜು ಹಾಗೂ ವಿನೋದ್ ಎಂಬುವರು ಕಳೆದ ತಡರಾತ್ರಿ ಬೈಕ್‌ನಲ್ಲಿ ಮಹಿಳೆಯ ಶವದೊಂದಿಗೆ ಬರುತ್ತಿದ್ದರು. ಈ ವೇಳೆ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಆಗ ಸ್ಥಳಕ್ಕೆ ಬಂದ ಪೊಲೀಸರಿಗೆ ಮಹಿಳೆಯ ಮೃತದೇಹ ಇರುವುದು ಪತ್ತೆಯಾಗಿದೆ. ಅನುಮಾನಗೊಂಡ ಪೊಲೀಸರು ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಮಹಿಳೆ ಮೃತಪಟ್ಟು ಅದಾದಲೇ ಐದಾರು ಗಂಟೆ ಕಳೆದಿರುವುದು ಬಯಲಾಗಿದೆ. ಆಗ ಬೈಕ್‌ನಲ್ಲಿ ಬಂದವರನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಹಣದ ವಿಚಾರವಾಗಿ ಈ ಮಹಿಳೆಯ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹತ್ಯೆಗೀಡಾದ ಮಹಿಳೆಯನ್ನು ರಾಜರಾಜೇಶ್ವರಿ ನಗರದ ಮುತ್ತುರಾಯನ ನಗರ ನಿವಾಸಿ ಶ್ವೇತಾ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಮೇಲೆ ಆಕೆಯ ಶವವನ್ನು ಬೈಕ್‌ನಲ್ಲೇ ರಾಜರಾಜೇಶ್ವರಿ ನಗರದಿಂದ ರಾಮನಗರದತ್ತ ಸಾಗಿಸುತ್ತಿದ್ದರು.
ಕೊಲೆಯಾದ ಶ್ವೇತಾ ಹಾಗೂ ಆಕೆಯ ಸ್ನೇಹಿತೆ ದುರ್ಗಿ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು. ಈ ವಿಚಾರದಲ್ಲಿ ಮನಸ್ತಾಪವಾಗಿ ದುರ್ಗಿ ತನ್ನ ಪತಿ ರಘು ಜೊತೆಗೂಡಿ ಶ್ವೇತಾಳನ್ನು ಹತ್ಯೆ ಮಾಡಿದ್ದರು. ರಘು ತನ್ನ ಇಬ್ಬರು ಸ್ನೇಹಿತರ ಮೂಲಕ ಬೈಕ್‌ನಲ್ಲೇ ಚನ್ನಪಟ್ಟಣಕ್ಕೆ ಶವ ಸಾಗಿಸಿ ಅಲ್ಲಿನ ಯಾವುದಾದರೂ ಕೆರೆಯಲ್ಲಿ ಎಸೆಯಲು ಪ್ಲಾನ್ ಮಾಡಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಪ್ರಕರಣ ಸಂಬಂಧ ಚನ್ನಪಟ್ಟಣದಲ್ಲಿ ದುರ್ಗಿ ಮತ್ತು ರಘು ಅವರನ್ನು ಪೊಲೀಸರು ಬಂಧಿಸಿದ್ದಾರೆ.