ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ರೇಪ್ ನಂತರ ಮಾರಾಟ ಮಾಡಿದ್ದ ದುರುಳರು
ಭೋಪಾಲ್; ಮದುವೆ ಕಾರ್ಡ್ ಹಂಚಲು ಹೋಗುತ್ತಿದ್ದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅತ್ಯಾಚಾರ ನಡೆಸಿದ ನಂತರ ಆಕೆಯನ್ನು ಮಾರಾಟ ಮಾಡಲಾಗಿದೆ. ಈ ಘಟನೆ ನಡೆದಿರೋದು ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ. ಯುವತಿ ಉತ್ತರ ಪ್ರದೇಶ ಮೂಲದವಳು ಎಂದು ತಿಳಿದುಬಂದಿದೆ.
ಕಳೆದ ತಿಂಗಳು ಈ ಕೃತ್ಯ ಎಸಗಲಾಗಿದ್ದು, ಈಗ ಬೆಳಕಿಗೆ ಬಂದಿದೆ. ಏಪ್ರಿಲ್ 21 ರಂದು ಯುವತಿಯ ಮದುವೆ ನಡೆಯಬೇಕಿತ್ತು. ಹೀಗಾಗಿ ಆಕೆ ಏಪ್ರಿಲ್ 18 ರಂದು ಮದುವೆ ಕಾರ್ಡ್ ಹಂಚಲು ಹೋಗಿದ್ದಳು. ಈ ವೇಳೆ ಮೂವರು ಯುವಕರು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅನಂತರ ಆಕೆಯನ್ನು ರಾಜಕೀಯ ಪಕ್ಷವೊಂದರ ಮುಖಂಡನ ಜೊತೆ ಇರಿಸಲಾಗಿತ್ತು ಎಂದು ತಿಳಿದುಬಂದಿದೆ.
ಕೆಲವು ದಿನಗಳ ಕಾಲ ಸಂತ್ರಸ್ತೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟುಕೊಂಡಿದ್ದರು. ನಂತರದಲ್ಲಿ ಆಕೆಯನ್ನು ರಾಜಕೀಯ ಪಕ್ಷದ ನಾಯಕನಿಗೆ ಒಪ್ಪಿಸಿದ್ದಾರೆ. ನಾಯಕನೊಂದಿಗೆ 5 ದಿನಗಳ ಕಾಲ ಝಾನ್ಸಿ ಜಿಲ್ಲೆಯಲ್ಲಿ ಇರಿಸಿದ್ದಲ್ಲದೇ, ಬಳಿಕ ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.