Bengaluru

ಸಿಎಂ ಮಾಡಲು 2500 ಕೋಟಿ ಕೇಳಿದ್ದರು; ಯತ್ನಾಳ್‌ ಹೇಳಿಕೆ ಬಗ್ಗೆ ತನಿಖೆ ನಡೆಸಿ ಎಂದ ಡಿಕೆಶಿ

ಬೆಂಗಳೂರು; ಮುಖ್ಯಮಂತ್ರಿ ಮಾಡಲು 2500 ಕೋಟಿ ರೂಪಾಯಿ ನೀಡಬೇಕು ಎಂದು ಕೆಲವರು ನನ್ನನ್ನು ಕೇಳಿದ್ದರು ಎಂದು ವಿಜಯಪುರ ಶಾಸಕ ಹಾಗೂ ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ಹೀಗಾಗಿ ಈ ಕುರಿತು ಸೂಕ್ತ ತನಿಖೆಯಾಗಬೇಕು. ಎಸಿಬಿಯವರು ಈ ಬಗ್ಗೆ ಎಫ್‌ಐಆರ್‌ ದಾಖಲಿಸಿ, ಯತ್ನಾಳ್‌ ಅವರ ಬಳಿ ಯಾರು ಹಣ ಕೇಳಿದರು ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸಾಮಾನ್ಯ ವ್ಯಕ್ತಿ ಏನಲ್ಲ. ರಾಜ್ಯ ಬಿಜೆಪಿಯ ಹಿರಿಯ ನಾಯಕ. ಕೇಂದ್ರದಲ್ಲಿ ಸಚಿವರಾಗಿ, ಶಾಸಕರಾಗಿ ಕೆಲಸ ಮಾಡಿದವರು. ಅವರ ಮಾತನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಮುಖ್ಯಮಂತ್ರಿ ಹುದ್ದೆ ನೀಡಲು 2,500 ಕೋಟಿಗೆ ಬೇಡಿಕೆ ಇಟ್ಟಿರುವುದು ಗಂಭೀರ ವಿಚಾರ. ಈ ಬಗ್ಗೆ ತಕ್ಷಣ ಸೂಕ್ತ ತನಿಖೆ ನಡೆಯಬೇಕು ಎಂದು ಶಿವಕುಮಾರ್‌ ಒತ್ತಾಯಿಸಿದರು.

ಈ ಸರ್ಕಾರದಲ್ಲಿ ಮುಖ್ಯಮಂತ್ರಿ, ಮಂತ್ರಿ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌, ಎಸಿಪಿ, ಡಿವೈಎಸ್‌ಪಿ, ಎಸ್‌ಪಿ, ತಹಶೀಲ್ದಾರ್‌, ಶಿಕ್ಷಕರು ಎಲ್ಲ ಹುದ್ದೆಗಳಿಗೂ ದರ ನಿಗದಿ ಮಾಡಿದ್ದಾರೆ. ಮಂತ್ರಿ ಮಾಡಬೇಕಾದರೆ 100 ಕೋಟಿ ಕೊಡಬೇಕಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉತ್ತರ ನೀಡಲಿ ಎಂದು ಆಗ್ರಹಿಸಿದರು.

Share Post