Bengaluru

ಪಿಎಸ್‌ಐ ಅಕ್ರಮ; ಬೆಂಗಳೂರಿನ ಏಳು ಕೇಂದ್ರಗಳಲ್ಲೂ ಅಕ್ರಮದ ವಾಸನೆ

ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ ವೇಳೆ ಬೆಂಗಳೂರಿನ 7 ಕೇಂದ್ರಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಬಗ್ಗೆ ಸಿಐಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವರದಿ ಕೂಡಾ ನೀಡಿದೆ. ಬೆಂಗಳೂರಿನ ಏಳು ಕೇಂದ್ರಗಳಲ್ಲಿ ಪರೀಕ್ಷೆ ಬರೆದವರಲ್ಲಿ 22 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರ ಒಎಂಆರ್‌ ಪ್ರತಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಅವು ಸಂದೇಹಾಸ್ಪದವಾಗಿವೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಒಎಂಆರ್‌ ಅಸಲಿ ಪ್ರತಿ ಹಾಗೂ ಕಾರ್ಬನ್‌ ಪ್ರತಿಗಳನ್ನು ಪರಿಶೀಲನೆ ಮಾಡಲು ಈಗ ಸಿಐಡಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಐಡಿ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಲಿಖಿತ ಪರೀಕ್ಷೆಯನ್ನೇ ರದ್ದುಪಡಿಸಿರುವ ರಾಜ್ಯ ಸರ್ಕಾರ, ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲು ಆದೇಶ ಹೊರಡಿಸಿದೆ.

ರಾಜ್ಯದ 92 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಕಲಬುರಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ 11 ಅಭ್ಯರ್ಥಿಗಳ ಪೈಕಿ 8 ಮಂದಿ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಅಭ್ಯರ್ಥಿಗಳು, ಶಾಲಾ ಸಿಬ್ಬಂದಿ, ವ್ಯವಸ್ಥಾಪಕರು, ಏಜೆಂಟರು ಹಾಗೂ ಇತರರ ಸಹಕಾರದಿಂದ ಪರೀಕ್ಷೆ ಪ್ರಕ್ರಿಯೆಯನ್ನು ಗಣನೀಯವಾಗಿ ದುರ್ಬಲಗೊಳಿಸಿರುವುದು ಸಿಐಡಿ ವಿಚಾರಣೆ ಹಾಗೂ ತನಿಖೆಯಿಂದ ಗೊತ್ತಾಗಿದೆ. ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದ ರೀತಿಯಲ್ಲೇ ಇತರೆ ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರ ನಡೆದಿರುವುದನ್ನು ತಳ್ಳಿಹಾಕಲಾಗುವುದಿಲ್ಲ ಎಂದೂ ಆದೇಶದಲ್ಲಿ ಹೇಳಲಾಗಿದೆ.

ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಎಸಗಿದ್ದ ಆರೋಪದಡಿ 12 ಅಭ್ಯರ್ಥಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಒಎಂಆರ್ ಪ್ರತಿ ತಿದ್ದಿ ಅಕ್ರಮ ಎಸಗಿದ್ದ ಆರೋಪದಡಿ 22 ಮಂದಿ ವಿರುದ್ದ ಸಿಐಡಿ ಅಧಿಕಾರಿಗಳು ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು 12 ಮಂದಿ ಯನ್ನು ಬಂಧಿಸಲಾಗಿದೆ. ಇನ್ನೂ 10 ಮಂದಿಯ ಬಂಧನ ಆಗ ಬೇಕಿದೆ. ಈ ಕುರಿತ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಕಲಬುರಗಿ ಜ್ಞಾನಜ್ಯೋತಿ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ 8 ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿ ಗಳು ಈಗಾಗಲೇ ಬಂಧಿಸಿದ್ದಾರೆ. ಇದೀಗ 12 ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಪ್ರಕರಣವೂ ಸಿಐಡಿಗೆ ವರ್ಗ ಆಗಲಿದೆ ಎಂದೂ ತಿಳಿಸಿವೆ.

Share Post