ತಮಿಳುನಾಡಿನಲ್ಲಿ ಭೀಕರ ದುರಂತ; ರಥಕ್ಕೆ ವಿದ್ಯುತ್ ತಗುಲಿ 11 ಮಂದಿ ದುರ್ಮರಣ
ಚೆನ್ನೈ: ತಮಿಳುನಾಡಿನ ತಾಂಜಾವೂರಿನಲ್ಲಿ ಭೀಕರ ದುರಂತ ನಡೆದುಹೋಗಿದೆ. ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ರಥೋತ್ಸವದ ವೇಳೆ ವಿದ್ಯುತ್ ಅವಘಡ ಸಂಭವಿಸಿದ್ದು, ಮೂವರು ಮಕ್ಕಳು ಸೇರಿ ಹನ್ನೊಂದು ಮಂದಿ ದಾರುಣ ಸಾವಿಗೀಡಾಗಿದ್ದಾರೆ.
ದೇವರ ರಥೋತ್ಸವಕ್ಕೆಂದು ನೂರಾರು ಭಕ್ತರು ಸೇರಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ. ಹೈ-ವೋಲ್ಟೇಜ್ ವಿದ್ಯುತ್ ತಂತಿ ತಗುಲಿದ ಪರಿಣಾಮ ರಥ ಹೊತ್ತಿ ಉರಿದಿದೆ. ಹತ್ತಿರವೇ ನಿಂತಿದ್ದ 11 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆವಾಗಿದೆ ಎಂದು ತಿಳಿದುಬಂದಿದೆ.
ಅನುಮತಿಯಿಲ್ಲದೆ ರಥೋತ್ಸವ ನಡೆಸಿದ್ದಾರೆ, ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳಲಾಗಿಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.