ಟ್ವಿಟರ್ ಖರೀದಿ ಮಾಡಿದ ವಿಶ್ವದ ದೊಡ್ಡ ಶ್ರೀಮಂತ ಎಲಾನ್ ಮಸ್ಕ್
ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಟೆಸ್ಲಾ ಖ್ಯಾತಿಯ ಎಲಾನ್ ಮಸ್ಕ್ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅನ್ನು 3.36 ಲಕ್ಷ ಕೋಟಿಗೆ ಅಂದರೆ 44 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಿದ್ದಾರೆ. ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನಲ್ಲಿ ಶೇ.9.2ರಷ್ಟು ಷೇರು ಖರೀದಿಸಿದ್ದು, ಇದೀಗ ಟ್ವಿಟರ್‌ನ್ನು ಸಂಪೂರ್ಣ ಅವರ ತೆಕ್ಕೆಗೆ ತೆಗದುಕೊಂಡಿದ್ದಾರೆ. ಪ್ರತಿ ಷೇರಿಗೆ 54.20 ಡಾಲರ್ (4,149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು. ಮಸ್ಕ್ ಖರೀದಿ ಪ್ರಸ್ತಾಪಕ್ಕೆ ಟ್ವಿಟ್ಟರ್ ಆಡಳಿತ ಮಂಡಳಿ ಒಪ್ಪಿದೆ. ವ್ಯಾಪಾರಕ್ಕೆ ಅಂತಿಮ ಮುದ್ರೆ ಕೂಡ ಬಿದ್ದಿದೆ.
ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ವಿಟರ್ ಖಾತೆಯನ್ನು ಮರು ಚಾಲನೆಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಅವರ ಖಾತೆಯನ್ನು ಟ್ವಿಟರ್ ಬ್ಯಾನ್ ಮಾಡಿತ್ತು. ಟ್ವಿಟರ್ಗೆ ಸೆಡ್ಡು ಹೊಡೆದಿದ್ದ ಡೊನಾಲ್ಡ್ ಟ್ರಂಪ್, ತಮ್ಮದೇ ವೇದಿಕೆಯಾದ ಟ್ರೂತ್ ಸೋಶಿಯಲ್ ಆರಂಭಿಸಿದ್ದರು. ಈ ವೇದಿಕೆ ಮೇಲೆಯೇ ಹೆಚ್ಚು ಗಮನ ಹರಿಸುವುದಾಗಿ ಟ್ರಂಪ್ ಫಾಕ್ಸ್ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ.