Bengaluru

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಲೋಕಾರ್ಪಣೆ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ದುಬಾರಿ ಆರೋಗ್ಯ ಸೇವೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಕ್ಕಾಗ ಮಾತ್ರ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಯೂನಿಟ್ ಲೋಕಾರ್ಪಣೆ ಮಾಡಿ ಮಾತನಾಡಿದ ಸಚಿವರು, ಇಂತಹ ಆರೋಗ್ಯ ಸೌಲಭ್ಯಗಳು ಕರ್ನಾಟಕದ ಆರೋಗ್ಯ ಕ್ಷೇತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆ ಸಾರ್ವಜನಿಕರಿಗೆ ಸಿಗುತ್ತಿದೆ. ದುಬಾರಿ ಚಿಕಿತ್ಸೆಗಳು ಸರ್ಕಾರಿ ಆರೋಗ್ಯ ಸೇವೆಗಳ ಮೂಲಕ ಬಡವರಿಗೂ ಸಿಗುವಂತಾಗಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. ಕೊರೊನಾ ನಂತರ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳು ಆಗುತ್ತಿವೆ. ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮತ್ತು ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದರು.

ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಅಥವಾ HBO2 ದುಬಾರಿ ಚಿಕಿತ್ಸೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಸೇವೆ ಲಭ್ಯವಾಗುತ್ತಿರುವುದರಿಂದ ಸಾಮಾನ್ಯ ಜನರಿಗೂ ಇದರ ಸೇವೆ ಸಿಗುವ ಹಾಗಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉದ್ಘಾಟನೆಯಾಗಿರುವ ಈ HBO2 ಯೂನಿಟ್ ಅನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ. ಸುಮಾರು 3.5 ಕೋಟಿ ರೂಪಾಯಿ ವೆಚ್ಚದ ಆಧುನಿಕ ಯಂತ್ರೋಪಕರಣಗಳು ಇದಾಗಿದೆ ಎಂದು ವಿವರಿಸಿದರು.

Share Post