2027ಕ್ಕೆ ರಾಜ್ಯ ಮಲೇರಿಯಾ ಮುಕ್ತ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್
ಬೆಂಗಳೂರು: ಮನುಕುಲಕ್ಕೆ ಶಾಪವಾಗಿರುವ ಮಲೇರಿಯಾ ವಿರುದ್ಧ ಸರ್ಕಾರ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಿದೆ. ಕೇಂದ್ರ ಸರ್ಕಾರ 2030ಕ್ಕೆ ಮಲೇರಿಯಾ ಮುಕ್ತ ಭಾರತಕ್ಕೆ ಶ್ರಮಿಸುತ್ತಿದೆ. ಆದರೆ ಕರ್ನಾಟಕದಲ್ಲಿ 2027ರ ಹೊತ್ತಿಗೆ ಮಲೇರಿಯಾ ನಿರ್ಮೂಲನೆ ಆಗಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕರೆ ಕೊಟ್ಟಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪಿಎಂಎಸ್ ಎಸ್ ವೈ ಆಸ್ಪತ್ರೆ ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲೇರಿಯಾ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಜೊತೆಯಾಗಿ ಶ್ರಮ ಪಟ್ಟರೆ ಆರೋಗ್ಯಯುಕ್ತ ಕರ್ನಾಟಕದ ಕನಸು ನನಸಾಗಬಹುದು ಎಂದು ಹೇಳಿದರು.
ಏಪ್ರಿಲ್ 25ನ್ನು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಕಾರ್ಯ ಜಾಥಾಗಳ ಮೂಲಕ ನಡೆಯುತ್ತಿದೆ. ಪ್ರತಿಯೊಂದು ತಾಲೂಕುಗಳಲ್ಲೂ ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಕಾರ್ಯ ವಿಭಿನ್ನವಾಗಿ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಸ್ವಚ್ಛತೆಯ ಮಹತ್ವನ್ನು ಸಾರ್ವಜನಿಕರಿಗೆ ತಿಳಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ವಿಶ್ವ ಮಲೇರಿಯಾ ದಿನವನ್ನು ಆರಂಭದಲ್ಲಿ “ಆಫ್ರಿಕಾ ಮಲೇರಿಯಾ ದಿನ” ಎಂದು ಆಚರಣೆ ಮಾಡಲಾಗುತ್ತಿತ್ತು. ಬಿಸಿಲಿರುವ ಪ್ರದೇಶಗಳಲ್ಲಿ ಮಲೇರಿಯಾ ಹೆಚ್ಚಾಗಿತ್ತು. ಹೀಗಾಗಿ ಆಫ್ರಿಕಾ ದೇಶಗಳಲ್ಲಿ, ಏಷ್ಯಾಖಂಡದಲ್ಲಿ ಮಲೇರಿಯಾ ಸೋಂಕು ಹೆಚ್ಚಿದೆ. ಅಮೆರಿಕಾದಲ್ಲಿ ಪ್ರವಾಸಿಗರಿಂದಾಗಿ ಅಪರೂಪಕ್ಕೆ ಮಲೇರಿಯಾ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಐರೋಪ್ಯ ದೇಶಗಳಲ್ಲಿ ಮಲೇರಿಯಾ ಪ್ರಕರಣಗಳು ಅತೀ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತವೆ. ಏಷ್ಯಾ ಖಂಡದಲ್ಲಿ ಮಲೇರಿಯಾದಿಂದಾಗುವ ಸಾವುಗಳ ಪೈಕಿ ಅತೀ ಹೆಚ್ಚು ಸಾವು ಭಾರತದಲ್ಲೇ ಆಗುತ್ತದೆ. ಇದು ಗಂಭೀರ ವಿಚಾರ ಎಂದು ಹೇಳಿದರು.