ಮೈಸೂರು ಎರಡು ಪಾರಂಪರಿಕ ಕಟ್ಟಡಗಳ ತೆರವಿಗೆ ನಿರ್ಧಾರ
ಮೈಸೂರು: ಸಾಂಸ್ಕೃತಿಕ ನಗರಿ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ಗಳನ್ನು ನೆಲಸಮಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ. ಜಿಲ್ಲಾ ಪಾರಂಪರಿಕ ಸಮಿತಿ ಈ ನಿರ್ಧಾರ ಕೈಗೊಂಡಿದ್ದು, ಮೂಲ ವಿನ್ಯಾಸ ಉಳಿಸಿಕೊಂಡು ಪಾರಂಪರಿಕ ಶೈಲಿಯಲ್ಲೇ ಹೊಸ ಕಟ್ಟಡಗಳನ್ನು ಕಟ್ಟಲು ತೀರ್ಮಾನಿಸಲಾಗಿದೆ.
ಎರಡೂ ಕಟ್ಟಡಗಳು ತುಂಬಾ ಹಳೆಯದಾಗಿವೆ. ಬೀಳೋ ಹಂತದಲ್ಲಿವೆ. ಹೀಗಾಗಿ ಈ ಕಟ್ಟಡಗಳನ್ನು ಕೆಡವಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಸಮಿತಿಯ ಅಧ್ಯಕ್ಷರಾದ ಬಗಾದಿ ಗೌತಮ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನೂರಾರು ವರ್ಷಗಳ ಹಳೆಯ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಶಿಥಿಲಾವಸ್ಥೆಯಲ್ಲಿದ್ದು, ಈಗಾಗಲೇ ಕೆಲವು ಭಾಗಗಳು ಕುಸಿದು ಬಿದ್ದಿವೆ.
ಹಾಗಾಗಿ, ತಜ್ಞರು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಅಲ್ಲಿ ವ್ಯಾಪಾರ ಚಟುವಟಿಕೆ ನಡೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಈಗ ಆ ಕಟ್ಟಡಗಳನ್ನು ನೆಲಸಮ ಮಾಡಿ ಹಳೆ ಪಾರಂಪರಿಕ ಶೈಲಿ ಹಾಗೂ ವಿನ್ಯಾಸದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಪಾರಂಪರಿಕ ಸಮಿತಿ ತೆಗೆದುಕೊಂಡ ನಿರ್ಧಾರ ಹಾಗೂ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿ ಅನುಮತಿ ಸಿಕ್ಕ ನಂತರ ಸರ್ಕಾರದ ಅನುಮೋದನೆ ಪಡೆದು ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.