ಸಂತೋಷ್ ಆತ್ಮಹತ್ಯೆ ಕೇಸ್; ಬಿಜೆಪಿ ನಾಯಕರಿದ್ದ ಹೋಟೆಲ್ಗೆ ಎಎಪಿ ಮುತ್ತಿಗೆ
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಖಂಡಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು. ಬೆಳಗಾವಿ ನಗರದಲ್ಲಿ ಬಿಜೆಪಿ ನಾಯಕರು ತಂಗಿರುವ ಹೋಟೆಲ್ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಂಗಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಸುದ್ದಿ ಗೊತ್ತಾಗುತ್ತಿದ್ದಂತೆ ಆಪ್ ಕಾರ್ಯಕರ್ತರು ಹೋಟೆಲ್ಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಪ್ ನಾಯಕ ರಾಜು ಟೋಪನವರ ನೇತೃತ್ವದಲ್ಲಿ ಹೋಟೆಲ್ಗೆ ಮುತ್ತಿಗೆ ಹಾಕಿ, ಸಂತೋಷ್ ಸಾವಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ದೂರಿದ್ದಾರೆ. ಜೊತೆಗೆ ಸಚಿವ ಈಶ್ವರಪ್ಪ, ಬಿಎಸ್ವೈ, ಅರುಣ್ ಸಿಂಗ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಹೋಟೆಲ್ ಮುತ್ತಿಗೆಗೆ ಯತ್ನಿಸಿದ ಆಪ್ ಕಾರ್ಯಕರ್ತರನ್ನು ಮಾಳಮಾರುತಿ ಠಾಣೆ ಪೊಲೀಸರು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದರು.