ಬಾಲಕಿ ಮೇಲೆ ಅತ್ಯಾಚಾರ; ಟಿಎಂಸಿ ಮುಖಂಡನ ಮಗನ ಅರೆಸ್ಟ್
ನಾಡಿಯಾ(ಪಶ್ಚಿಮ ಬಂಗಾಳ): ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡನ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾದ ಹಂಸಖಾಲಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ನಾಡಿಯಾ ಜಿಲ್ಲೆಯ ಹಂಸಖಾಲಿ ಎಂಬಲ್ಲಿ ಇತ್ತೀಚೆಗೆ ಹುಟ್ಟುಹಬ್ಬ ಸಮಾರಂಭವೊಂದರಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅನಂತರ ಸಂತ್ರಸ್ತೆ ಮೃತಪಟ್ಟಿದ್ದಳು. ತೃಣಮೂಲ ಕಾಂಗ್ರೆಸ್ ಪಕ್ಷದ ಪಂಚಾಯಿತಿ ಸದಸ್ಯನ ಮಗನೇ ಪ್ರಮುಖ ಆರೋಪಿ ಎಂದು ಬಾಲಕಿಯ ಪೋಷಕರು ದೂರಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. 9ನೇ ತರಗತಿ ಓದುತ್ತಿದ್ದ ಬಾಲಕಿ ಇತ್ತೀಚೆಗೆ ಆರೋಪಿಯ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದಳು. ವಾಪಸ್ಸಾಗುವಾಗ ಆಕೆ ತೀವ್ರ ಅಸ್ವಸ್ಥಳಾಗಿದ್ದಳು. ಕೆಲ ಸಮಯದ ನಂತರ ಮೃತಪಟ್ಟಿದ್ದಾಳೆ.
ಸ್ಥಳೀಯ ಟಿಎಂಸಿ ನಾಯಕನ ಮಗನ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿ ಹಿಂದಿರುಗಿದ ನಮ್ಮ ಮಗಳಿಗೆ ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಆಕೆ ಮೃತಪಟ್ಟಿದ್ದಾಳೆ ಎಂದು ಪೋಷಕರು ದೂರಿನಲ್ಲಿ ಹೇಳಿದ್ದು, ಆರೋಪಿ ಮತ್ತು ಅವನ ಸ್ನೇಹಿತರು ನಮ್ಮ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬುದು ಹಲವರನ್ನು ವಿಚಾರಿಸಿದ ಬಳಿಕ ನಮಗೆ ಖಚಿತವಾಗಿದೆ ಎಂದು ಹೇಳಿದ್ದಾರೆ.