ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯಮ ಸ್ಥಾಪಿಸಲು ಸಬ್ಸಿಡಿ: ನಿರಾಣಿ
ಬೆಳಗಾವಿ: ಆರ್ಥಿಕವಾಗಿ ಹಿಂದುಳಿದ ವರ್ಗದವರು ಉದ್ಯಮ ಸ್ಥಾಪಿಸಲು ಅನುವಾಗುವಂತೆ ಕೆಐಎಡಿಬಿಯಿಂದ ಕೈಗಾರಿಕಾ ನಿವೇಶನಕ್ಕೆ ಶೇಕಡಾ 75ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ತಿಳಿಸಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎಪಿಜೆ ಅಬ್ದುಲ್ ಕಲಾಂ ಆಡಿಟೋರಿಯಂನಲ್ಲಿ ಶುಕ್ರವಾರ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉದ್ದಿಮೆಶೀಲರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಕೆಐಎಡಿಬಿ)ಯಿಂದ ಕೈಗಾರಿಕೆ ನಿವೇಶನಕ್ಕೆ ಶೇಕಡಾ 75 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇ.75ರಷ್ಟು ರಿಯಾಯಿತಿ ನೀಡಲಾಗುವುದು,”ಎಂದು ಅವರು ಹೇಳಿದರು.
“ಬೆಳಗಾವಿ ಅಲ್ಲದೇ, ಧಾರವಾಡ, ಉತ್ತರಕನ್ನಡ, ವಿಜಯಪುರ, ಬಾಗಲಕೋಟೆ, ಹಾವೇರಿ ಹಾಗೂ ಗದಗದ ಸುಮಾರು 11 ಸಾವಿರ ವಿದ್ಯಾರ್ಥಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಹಳ ಸಂತಸದ ವಿಚಾರ. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿರುವವರ ಪೈಕಿ ಉದ್ಯಮ ಸ್ಥಾಪಿಸುವ ಆಸಕ್ತಿ ತೋರುವವರಿಗೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಒಂದು ವಾರದಿಂದ ಒಂದು ತಿಂಗಳವರೆಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಆರಂಭದಿಂದ ಕೊನೆಯವರೆಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು,”ಎಂದು ಅವರು ಭರವಸೆ ನೀಡಿದರು.
“ಬೇರೆಯವರ ಕೈ ಕೆಳಗೆ ನೀವು ದುಡಿಯಬೇಕಿಲ್ಲ. ಛಲ ಬಿಡದೆ ಸಾಧಿಸಿದರೆ ನೀವೇ ಉದ್ಯಮ ಸ್ಥಾಪಿಸಿ ಇತರರಿಗೆ ಕೆಲಸ ಕೊಡಬಹುದು. ಈ ಕಾರ್ಯಕ್ರಮದಲ್ಲಿ ಉದ್ಯಮಿಗಳಾಗುವುದು ಹೇಗೆ? ಎಲ್ಲಿ ಮತ್ತು ಹೇಗೆ ಸಾಲಸೌಲಭ್ಯ ದೊರೆಯುತ್ತದೆ? ಯಾವ ಯಾವ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ಇದೆ ಎಂಬುದನ್ನು ತಜ್ಞರು ವಿವರಿಸಿದ್ದಾರೆ ಉದ್ದಿಮೆ ಸ್ಥಾಪಿಸಲು ಹಣ ಮುಖ್ಯವಲ್ಲ. ಸಾಧಿಸುವ ಛಲ, ಗುರಿ ಇರಬೇಕು. ಅದಕ್ಕೆ ಪೂರಕವಾಗಿ ನಮ್ಮ ಇಲಾಖೆಯಿಂದ ಎಲ್ಲ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧ. ಮುಂದಿನ ದಿನಗಳಲ್ಲಿ, ಮೈಸೂರು, ಕರಾವಳಿ ಹಾಗೂ ಬೆಂಗಳೂರಿನ ಕಂದಾಯ ವಿಭಾಗ 2ರಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ,” ಎಂದು ಹೇಳಿದರು.