ಏಪ್ರಿಲ್ 10ರಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್
ನವದೆಹಲಿ: ಎರಡು ಡೋಸ್ ಕೊವಿಡ್ ಲಸಿಕೆ ಪಡೆದವರು ಬೂಸ್ಟರ್ ಡೋಸ್ ಬಡೆಯಬೇಕೆಂದು ತಜ್ಞರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಿರಿಯ ನಾಗರಿಕರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗಿದೆ. ಇದೀಗ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಎರಡು ಡೋಸ್ಗಳನ್ನು ಪಡೆದು 9 ತಿಂಗಳಾಗಿರುವ, 18 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮುಂಜಾಗ್ರತಾ ಡೋಸ್ ಎಂದು ಕರೆಯಲ್ಪಡುವ ಬೂಸ್ಟರ್ ಡೋಸ್ಗಳನ್ನು ಏಪ್ರಿಲ್ 10 ರಿಂದ ಖಾಸಗಿ ಲಸಿಕಾ ಕೇಂದ್ರಗಳ ಮೂಲಕ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಈವರೆಗೆ, ಕೋವಿಡ್ ವಾರಿಯರ್ಗಳು ಮತ್ತು 60 ವರ್ಷ ಮೇಲ್ಪಟ್ಟವರು ಮಾತ್ರ ಬೂಸ್ಟರ್ ಪಡೆಯಲು ಅರ್ಹರಾಗಿದ್ದರು. ಇನ್ನು ಮುಂದೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಲು ಸರ್ಕಾರ ನಿರ್ಧರಿಸಿದೆ.