ಶ್ರೀರಾಮನ ಹೆಸರಿನಲ್ಲಿ ಅಶಾಂತಿ ಸೃಷ್ಟಿ ಮಾಡಬೇಡಿ; ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು: ಶ್ರೀರಾಮನ ಹೆಸರು ಇಟ್ಟುಕೊಂಡು ಸಮಾಜದಲ್ಲಿ ಶಾಂತಿ ಹಾಳು ಮಾಡುವ ಕೆಲಸ ಮಾಡಬೇಡಿ. ಅಂಥ ಕೃತ್ಯಗಳನ್ನು ಎಸಗಲು ರಾವಣನ ಹೆಸರಿಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹಿಂದೂಪರ ಸಂಘಟನೆ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಕೆಲವರು ರಾಮಸೇನೆ, ಮತ್ಯಾವುದೋ ಸೇನೆ ಅಂತ ಹೆಸರು ಇಟ್ಟಕೊಂಡಿದ್ದಾರೆ. ರಾಮನ ಹೆಸರಿಟ್ಟುಕೊಂಡು ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ. ಅಂಥವರು ರಾವಣಸೇನೆ ಎಂದು ಹೆಸರಿಟ್ಟುಕೊಂಡರೆ ಉತ್ತಮ. ಇವರು ರಾಮನ ಹೆಸರಿಗೆ ಯಾಕೆ ಕಳಂಕ ತರುತ್ತಿದ್ದಾರೆ. ದಯಮಾಡಿ ಮರ್ಯಾದಾ ಪುರುಷೋತ್ತಮನ ಹೆಸರಿಗೆ ಕಳಂಕ ತರಬೇಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಪದೆ ಪದೇ ಬಿಜೆಪಿ ಸಹ ಸಂಸ್ಥೆಗಳು ಈ ರೀತಿ ಸಾಮರಸ್ಯ ಹಾಳು ಮಾಡುತ್ತಿದೆ. ನಿಜಕ್ಕೂ ನಮ್ಮ ಸಂಸ್ಕೃತಿಗೆ ಅಗೌರವ ತೋರಿಸುತ್ತಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ನಂತರವೂ ಈ ವಿಚಾರವನ್ನು ಲಘುವಾಗಿ ಪರಿಗಣಿಸಲಾಗ್ತಿದೆ. ದಿನಕ್ಕೆ ಒಂದು ವಿಚಾರ ಪ್ರಾರಂಭ ಮಾಡುತ್ತಿದ್ದಾರೆ. ನಿಜವಾಗಿಯೂ ಅವರು ರಾಮಭಕ್ತರೇ ಆಗಿದ್ದರೆ, ದಿನನಿತ್ಯದಲ್ಲಿ ನಮ್ಮ ಪರಂಪರಾಗತ ಸಂಪ್ರದಾಯ ಆಚರಣೆಗೆ ಒತ್ತು ಕೊಟ್ಟರೆ ಹಿಂದು ಧರ್ಮ ಕಾಪಾಡಿದಂತೆ ಆಗುತ್ತದೆ ಎಂದು ಅವರು ಹೇಳಿದರು.
ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅವರು, ಹೊಳೆನರಸೀಪುರದಲ್ಲಿ ದೀಪದ ಸ್ಥಂಭ ಕೈಯಲ್ಲಿ ಇಟ್ಟುಕೊಂಡು ಪ್ರಮುಖ ಬೀದಿಗಳಲ್ಲಿ ಹೋಗ್ತಾ ಇದ್ದೇವು. ದೇವರ ಭಜನೆ ಮಾಡುತ್ತಿದ್ದೇವೆ. ಬೆಳಗ್ಗೆ ದೇವಸ್ಥಾನದಲ್ಲಿ ಸುಪ್ರಭಾತ ಕೇಳಿಸುತ್ತಿತ್ತು. ಘಂಟೆ ನಾದ ಮೊಳಗುತ್ತಿತ್ತು. ಆ ಗಂಟೆನಾದ ಕೇಳಿದರೆ ನಮ್ಮ ಮೈ ನವಿರೀಳುತ್ತಿತ್ತು. ಈ ಮಹಾನುಭಾವರಿಗೆ ಏನಾಗುತ್ತದೆ ಎಂದು ಗೊತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.