ಹೊರಟ್ಟಿ ಪಕ್ಷ ಬಿಡುವ ವಿಚಾರ; ಅವರು ನೂರ ಒಂದನೆಯವರು ಎಂದ ಹೆಚ್ಡಿಕೆ
ಬೆಂಗಳೂರು: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಿರುವುದಕ್ಕೆ ನನಗೆ ಅಚ್ಚರಿ ಏನೂ ಆಗಿಲ್ಲ. ಅವರು ಹೋದರೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಹೊರಟ್ಟಿಯವರು ಬಿಜೆಪಿಯಿಂದ ಮೇಲ್ಮನೆ ಸ್ಪರ್ಧಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ ಸೇರಿ 100ಕ್ಕೂ ಹೆಚ್ಚು ನಾಯಕರು ಜೆಡಿಎಸ್ನಿಂದ ಹೊರಹೋಗಿದ್ದಾರೆ. ಬಸವರಾಜ ಹೊರಟ್ಟಿ 101ನೇಯವರು ಎಂದರು.
ಎಷ್ಟೇ ನಾಯಕರು ಪಕ್ಷ ತೊರೆದರೂ, ಪಕ್ಷಕ್ಕೆ ಏನೂ ಆಗುವುದಿಲ್ಲ. ನೂರಾರು ನಾಯಕರು ಪಕ್ಷ ತೊರೆದಿದ್ದರೂ, ಪಕ್ಷ ಈಗಲೂ ಉಳಿದಿದೆ. ಪಕ್ಷಕ್ಕೆ ಮತ್ತೊಬ್ಬ ಹೊರಟ್ಟಿ, ಮತ್ತೊಬ್ಬ ಕೋನರೆಡ್ಡಿ ಬರುತ್ತಾರೆ. ಅವರಿದ್ದಾಗ ಬಾಂಬೆ ಕರ್ನಾಟಕ ಉದ್ಧಾರ ಆಗಿತ್ತಾ? ಎಂದು ಹೆಚ್ಡಿಕೆ ಪ್ರಶ್ನಿಸಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಖರ್ಚು ಮಾಡ್ತಾರೆ. ಅಷ್ಟೊಂದು ಖರ್ಚು ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಹೊರಟ್ಟಿ ಹೇಳುತ್ತಿದ್ದರು. ಕಳೆದ ವಾರವಷ್ಟೇ ಅವರಿವರು ಕರೆಯುತ್ತಿದ್ದಾರೆ ಎಂದೂ ಹೇಳಿದ್ದರು. ನನಗಾಗಿ ನಿಮ್ಮ ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಹೋಗಿ ಅಂದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.