National

ಕಣಿವೆಗೆ ಉರುಳಿದ ಖಾಸಗಿ ಬಸ್‌; ಏಳು ಮಂದಿ ದುರ್ಮರಣ

ಚಿತ್ತೂರು: ಖಾಸಗಿ ಬಸ್‌ ಒಂದು ಉರುಳಿಬಿದ್ದ ಕಾರಣ ಒಟ್ಟು ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ-ತಿರುಪತಿ ಹೆದ್ದಾರಿಯಲ್ಲಿ ನಡೆದಿದೆ. ಬಕರಾಪೇಟ ಕನುಮ ಎಂಬಲ್ಲಿ ಈ ದುರಂತ ನಡೆದಿದೆ. ದುರ್ಘಟನೆಯಲ್ಲಿ 45 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅನಂತಪುರ ಜಿಲ್ಲೆಯ ಧರ್ಮಾವರಂನ ರಾಜೇಂದ್ರ ನಗರದ ವೇಣು ಅವರ ನಿಶ್ಚಿತಾರ್ಥ ಚಿತ್ತೂರು ಜಿಲ್ಲೆಯ ನಾರಾಯಣವನಂ ಮೂಲದ ಯುವತಿ ಜೊತೆ ನಿಶ್ಚಯವಾಗಿತ್ತು. ಇಂದು ಬೆಳಗ್ಗೆ ತಿರುಚಾನೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಖಾಸಗಿ ಬಸ್‌ನಲ್ಲಿ ಎಲ್ಲರೂ ಹೋಗುತ್ತಿದ್ದರು.

ಬಸ್‌ ಬಕರಾಪೇಟ ಕನುಮ ಹತ್ತಿರ ಬಂದಾಗ ಪಲ್ಟಿಯಾಗಿದೆ. ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ, ಸುಮಾರು 100 ಅಡಿಯ ಕಣಿವೆಗೆ ಉರುಳಿದೆ ಎಂದು ತಿಳಿದುಬಂದಿದೆ.  ಬಸ್ಸಿನಲ್ಲಿ  63 ಮಂದಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ಬಸ್‌ ಚಾಲಕ ಅತಿವೇಗವಾಗಿ ಬಸ್‌ ಚಾಲನೆ ಮಾಡುತ್ತಿದ್ದರಿಂದಲೇ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ.

     ಮೃತರನ್ನು ಮಾಲಿಶೆಟ್ಟಿ ವೆಂಗಪ್ಪ (60), ಮಾಲಿಶೆಟ್ಟಿ ಮುರಳಿ (45), ಕಾಂತಮ್ಮ (40), ಮಾಲಿಶೆಟ್ಟಿ ಗಣೇಶ್ (40), ಜೆ.ಯಶಸ್ವಿನಿ (8), ಚಾಲಕ ನಬಿ ರಸೂಲ್ ಮತ್ತು ಕ್ಲೀನರ್ ಎಂದು ಗುರುತಿಸಲಾಗಿದೆ.
Share Post