Bengaluru

ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿಯಿಂದ ಭೂ ಪರಿಹಾರ ಸರಳೀಕರಣ: ಸಚಿವ ನಿರಾಣಿ

ಬೆಂಗಳೂರು: ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಇನ್ನು ಮುಂದೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕ ಎನ್.ಎ.ಹ್ಯಾರಿಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಾಯ್ದೆಗಳು ಪ್ರತ್ಯೇಕವಾಗಿದ್ದವು. ಇತ್ತೀಚೆಗೆ ಹಾಲಿ ಇದ್ದ ಕೆಐಎಡಿಬಿ ಕಾಯ್ದೆಗೆ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಿದ್ದರಿಂದ ರೈತರಿಗೆ ತೊಂದರೆಯಾಗದಂತೆ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ಹೊಸ ಭೂ ಸ್ವಾದೀನ ಕಾಯ್ದೆ 2013ರ ಅನ್ವಯ ಭೂ ಪರಿಹಾರ ಒದಗಿಸುವ ಸಂಬಂಧ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ನಾವು ಯಾವುದೇ ವಿಳಂಬವಾಗದಂತೆ ಪರಿಹಾರವನ್ನು ವಿತರಣೆ ಮಾಡಲಿದ್ದೇವೆ ಎಂದರು. ಕೆಐಎಡಿಬಿ ಕಾಯ್ದೆ ಕಾಲಂ 28/4 ಅಡಿ ಅಂತಿಮ ಅಸೂಚನೆ ಹೊರಡಿಸಿ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ದರ ನಿಗದಿ ಪಡಿಸುವ ಸಲುವಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿ / ಕೆಐಎಡಿಬಿಯ ವಿಶೇಷ ಅಧಿಕಾರಿ, ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಭೂ ಮಾಲೀಕರದೊಂದಿಗೆ ಸಮಾಲೋಚಿಸಿ ಮಾರ್ಗಸೂಚಿ ದರವನ್ನು ನಿಗದಪಡಿಸುತ್ತಾರೆ ಎಂದು ನಿರಾಣಿ ಮಾಹಿತಿ ನೀಡಿದರು.

Share Post