ಸಫಾಯಿ ಕರ್ಮಚಾರಿಯ ಒಂಟಿ ಹೋರಾಟ: ಚರಂಡಿಯ ಕಸ ಮೈಮೇಲೆ ಸುರಿದುಕೊಳ್ಳಲು ಯತ್ನ
ರಾಯಚೂರು: ರಾಜ್ಯದಲ್ಲಿ ಮೂಲ ಸೌಕರ್ಯ ಕೊರತೆಯಿಂದ ಸದಾ ಒಂದಿಲ್ಲೊಂದು ಪ್ರತಿಭಟನೆ ನಡೆಯುತ್ತಲೇ ಇರುತ್ತದೆ. ಹೋರಾಟ, ಪ್ರತಿಭಟನೆ ಎಂದಾಕ್ಷಣ ನೆನಪಿಗೆ ಬರೋದು ಹಲವರು ಸೇರಿ ನ್ಯಾಯಕ್ಕಾಗಿ ಆಗ್ರಹಿಸುವುದು. ಆದರೆ ಇಲ್ಲೊಬ್ಬ ಸಹಾಯ ಕರ್ಮಚಾರಿ ಒಬ್ಬೊಂಟಿಯಗಿ ಜಿಲ್ಲಾಡಳಿತದ ವಿರುದ್ಧ ತೊಡೆ ತಟ್ಟಿದ್ದಾರೆ. ತಾನು ಮಹಿಳೆ ಎಂಬುದನ್ನೂ ನೋಡದೆ ನ್ಯಾಯಕ್ಕಾಗಿ ತಮ್ಮ ಹೋರಾಟವನ್ನು ಚಾಲೂ ಮಾಡಿದ್ದಾರೆ.
ಹೌದು ರಾಯಚೂರು ಜಿಲ್ಲಾಡಳಿತ ಮೂಲಸೌಕರ್ಯ ನೀಡದ ಆರೋಪದ ಅಡಿಯಲ್ಲಿ ಸಫಾಯಿ ಕರ್ಮಚಾರಿ ಗೀತಾ ಸಿಂಗ್ ಎಂಬುವವರು ವಿವಿಧ ಬೇಡಿಕೆ ಈಡೇರಿಕೆಗಾಗಿ ಚರಂಡಿ ಕಸವನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಇದುವರೆಗೂ ಯಾವುದೇ ರೀತಿಯ ಮೂಲಭೂತ ಸೌಕರ್ಯ ನೀಡಿಲ್ಲ ಎಂದು ಆರೋಪಿಸಿದ್ದು, ಕೂಡಲೇ ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.
ಈ ವೇಳೆ ಬೇರೆಯವರ ಮೂಲಕ ಚರಂಡಿ ವೇಸ್ಟ್ ಅನ್ನು ತರಿಸಿಕೊಂಡು ಮೈಮೇಲೆ ಸುರಿದುಕೊಳ್ಳಲು ಯತ್ನಿಸಿದ್ದಾರೆ. ಅಲ್ಲಿಯೇ ಸ್ಥಳದಲ್ಲಿದ್ದ ಪೊಲೀಸರು ಅದನ್ನು ತಡೆದು ಸಮಸ್ಯೆಯನ್ನು ವಿಚಾರಿಸಿದ್ದಾರೆ. ಈ ಬಗ್ಗೆ ಸದಾರ್ ಬಜಾರ್ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.