CrimeNational

ಮನೆ ಮುಂದೆ ಮಿಠಾಯಿ ಎಸೆದು ನಾಲ್ವರು ಮಕ್ಕಳ ಪ್ರಾಣ ತೆಗೆದು ದುಷ್ಕರ್ಮಿ: ಪ್ರಕರಣ ದಾಖಲು

ಉತ್ತರಪ್ರದೇಶ:   ಸಿಹಿತಿಂಡಿಗಳು ಮತ್ತು ಚಾಕೊಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಚಿಕ್ಕ ಮಕ್ಕಳಿಗೆ ಅಂದ್ರೆ ಪಂಚಪ್ರಾಣ.  ಇದನ್ನೇ ದಾಳವಾಗಿ ಬಳಸಿಕೊಂಡ ದುಷ್ಕರ್ಮಿಯೊಬ್ಬ ಮಿಠಾಯಿ ಕೊಟ್ಟು ನಾಲ್ಕು ಮಕ್ಕಳ ಪ್ರಾಣ ತೆಗೆದಿದ್ದಾನೆ. ಹೌದು ಬುಧವಾರ (ಮಾರ್ಚ್ 23,2022) ಯುಪಿಯ ಕುಶಿನಗರ ಲಾಥೂರ್ ಟೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಸಾಯಿ ಗ್ರಾಮದಲ್ಲಿ ಸಿಹಿ ತಿಂದು ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಸಿಸಾಯಿ ಗ್ರಾಮದಲ್ಲಿ ನಾಲ್ವರು ಮಕ್ಕಳು ಸಿಹಿ ತಿಂದು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು. ಮೃತರ ಪೈಕಿ ಮೂವರು ಮಕ್ಕಳು ಒಂದೇ ಕುಟುಂಬದವರು. ಮಕ್ಕಳ ಸಾವಿನ ನಂತರ ಎರಡು ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಯಾರೋ ದುಷ್ಕರ್ಮಿ ಸಿಹಿತಿಂಡಿಗಳನ್ನು ಮನೆ ಮುಂದೆ ಬಿಸಾಡಿದ್ದು, ಅವುಗಳನ್ನು ನೋಡಿ ಮಕ್ಕಳು ತಿಂದಿದ್ದಾರೆ. ಬಳಿಕ ಮಕ್ಕಳ ಆರೋಗ್ಯ ಹದಗೆಟ್ಟಿದೆ ಕೂಡಲೇ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ವಿ ಎಂದು ಮಗುವಿನ ತಂದೆ ಕಣ್ಣೀರಿಟ್ಟರು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share Post