Districts

ಹುಟ್ಟೂರಲ್ಲಿ ನವೀನ್‌ ಮೃತದೇಹದ ಅಂತಿಮ ದರ್ಶನ; ಸಂಜೆ ಆಸ್ಪತ್ರೆಗೆ ದೇಹದಾನ

ಹಾವೇರಿ: ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿಯ ಮೆಡಿಕಲ್‌ ವಿದ್ಯಾರ್ಥಿ ನವೀನ್ ಮೃತದೇಹವನ್ನು ತವರಿಗೆ ತರಲಾಗಿದೆ. ಹಾವೇರಿ ಜಿಲ್ಲೆಯ ಚಳಗೇರಿಯಲ್ಲಿ ಪೋಷಕರು ಮತ್ತು ಗ್ರಾಮಸ್ಥರು ನವೀನ್‌ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಅಕ್ಕಪಕ್ಕದ ಗ್ರಾಮಗಳ ಜನರು, ಸಂಬಂಧಿಗಳು ನವೀನ್‌ ಅವರ ಮೃತದೇಹದ ಅಂತಿಮ ದರ್ಶನ ಪಡೆದರು.

ಮೂರು ವಾರದ ಹಿಂದೆ ಉಕ್ರೇನ್‌ನ ಖಾರ್ಕೀವ್‌ನಲ್ಲಿ ನವೀನ್‌ ರಷ್ಯಾ ಸೇನೆಯ ಸೆಲ್‌ ದಾಳಿಗೆ ಬಲಿಯಾಗಿದ್ದರು. ಮೆಡಿಕಲ್‌ ನಾಲ್ಕನೇ ವರ್ಷ ಓದುತ್ತಿದ್ದ ನವೀನ್‌, ಉಳಿದುಕೊಂಡಿದ್ದ ಬಂಕರ್‌ ಸಮೀಪವೇ ಇದ್ದ ಸೂಪರ್‌ ಮಾರ್ಕೆಟ್‌ಗೆ ತೆರಳಿದ್ದಾಗ ಈ ದುರ್ಘಟನೆ ನಡೆದಿತ್ತು. ಇದೀಗ ದುಬೈನಿಂದ ಎಮಿರೇಟ್ಸ್ ಇಕೆ 568 ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮುಂಜಾನೆ ನವೀನ್‌ ಮೃತದೇಹವನ್ನು ತರಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತದೇಹ ಮತ್ತು ನವೀನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ನಂತರ ಪೊಲೀಸ್ ಭದ್ರತೆಯಲ್ಲಿ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನು ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮಕ್ಕೆ ತರಲಾಯಿತು. ನವೀನ ಗ್ಯಾನಗೌಡರ ಮೃತದೇಹವನ್ನು ದಾವಣಗೆರೆಯ ಎಸ್‌.ಎಸ್‌.ಆಸ್ಪತ್ರೆಗೆ ದಾನ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಇದಕ್ಕೂ ಮೊದಲ ಸ್ವಗ್ರಾಮದಲ್ಲಿ ವೀರಶೈವ ಪದ್ಧತಿ ಪ್ರಕಾರ ಪೂಜಾ ಕಾರ್ಯ ನೆರವೇರಿಸಲಾಗುತ್ತದೆ. ಸಂಜೆವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ.

Share Post