ಪಾಕಿಸ್ತಾನ ಪ್ರಧಾನಿ ಇಮ್ರಾಜ್ ಖಾನ್ಗೆ ಕುರ್ಚಿ ಕಳೆದುಕೊಳ್ಳುವ ಭೀತಿ
ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕುರ್ಚಿ ಕಳೆದುಕೊಳ್ಳುತ್ತಿರುವ ಭೀತಿ ಎದುರಾಗಿದೆ. ಅವರದೇ ಪಕ್ಷದ ಸಂಸದರು ಇಮ್ರಾನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ 24 ಸದಸ್ಯರು ಇಮ್ರಾನ್ ವಿರುದ್ಧ ಬಂಡೆದ್ದಿದ್ದಾರೆ. ಪ್ರತಿಪಕ್ಷಗಳು ಮಂಡಿಸಲು ಉದ್ದೇಶಿಸಿರುವ ಅವಿಶ್ವಾಸ ನಿರ್ಣಯವನ್ನು ಆಡಳಿತ ಪಕ್ಷದ ಸದಸ್ಯರೂ ಬೆಂಬಲಿಸಲು ತೀರ್ಮಾಸಿದ್ದಾರೆ. ಹೀಗಾಗಿ ಇಮ್ರಾನ್ ಖಾನ್ಗೆ ಪ್ರಧಾನಿ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಪ್ರತಿಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಇಮ್ರಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಿವೆ. ಈ ಸಂಬಂಧ ಈಗಾಗಲೇ ಪ್ರತಿಪಕ್ಷಗಳ 100 ಸದಸ್ಯರು ಮಾ.8ರಂದು ಮನವಿಯನ್ನೂ ಸಲ್ಲಿಸಿದ್ದಾರೆ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಹಾಗೂ ಹಣದುಬ್ಬರಕ್ಕೆ ಇಮ್ರಾನ್ ಖಾನ್ ಕಾರಣ ಎಂದು ಪ್ರತಿಪಕ್ಷಗಳು ದೂರಿವೆ.
ಹೀಗಾಗಿ ಇಮ್ರಾನ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಮಂಡಿಸಿರುವ ಅವಿಶ್ವಾಸ ನಿರ್ಣಯವು ಮಾ.28ರಂದು ಸಂಸತ್ತಿನ ಮುಂದೆ ಬರುವ ಸಾಧ್ಯತೆ ಇದೆ. ಈ ನಡುವೆ ಇಮ್ರಾನ್ ಖಾನ್ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಬೆಂಬಲಿಸಲು ತೀರ್ಮಾನಿಸಿದ್ದಾರೆ.