ಮುರುಗೋಡು ಡಿಸಿಸಿ ಬ್ಯಾಂಕ್ ಲೂಟಿ ಪ್ರಕರಣ; ಸಿಬ್ಬಂದಿಯೇ ಶಾಮೀಲು..?
ಬೆಳಗಾವಿ: ನಕಲಿ ಕೀ ಬಳಸಿ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ನ ಮುರುಗೋಡು ಶಾಖೆಯಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಹಣ ಮತ್ತು ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.ಬ್ಯಾಂಕ್ ಸಿಬ್ಬಂದಿಯೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕಳವಾದ ಹಣ, ಚಿನ್ನಾಭರಣವನ್ನು ಸಿಬ್ಬಂದಿಯೊಬ್ಬರ ಹೊಲದಲ್ಲಿ ಹೂತಿಡಲಾಗಿತ್ತು ಎನ್ನಲಾಗಿದೆ.
ಮಾರ್ಚ್ 5ರ ರಾತ್ರಿ ಮುರುಗೋಡು ಶಾಖೆಯಲ್ಲಿ ಬರೋಬ್ಬರಿ 6 ಕೋಟಿಗೂ ಹೆಚ್ಚು ಮೌಲ್ಯದ ಹಣ, ಚಿನ್ನಾಭರಣವನ್ನು ನಕಲಿ ಕೀ ಬಳಸಿ ಕಳವು ಮಾಡಿದ್ದರು. 4.37 ಕೋಟಿ ನಗದು, 1.63 ಕೋಟಿ ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ಯಲಾಗಿತ್ತು. ತೀವ್ರ ತನಿಖೆ ನಡೆಸಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ವಿವರಗಳನ್ನು ಸದ್ಯದಲ್ಲೇ ಬಹಿರಂಗಪಡಿಸಲಿದ್ದಾರೆ.
ಡಿಸಿಸಿ ಬ್ಯಾಂಕ್ ನಲ್ಲಿ ಕೃಷಿ ಸಾಲ, ಚಿನ್ನಾಭರಣಗಳನ್ನು ಅಡಮಾನವಿಟ್ಟುಕೊಂಡು ಸಾಲ ನೀಡಲಾಗುತ್ತದೆ. ಅಪಾರ ಪ್ರಮಾಣದ ಚಿನ್ನಾಭರಣ ಅಡವಿಟ್ಟುಕೊಂಡು ಸಾಲ ನೀಡಿರುವ ಮಾಹಿತಿ ಪಡೆದ ಸಿಬ್ಬಂದಿಯೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.