ಅಂಕೋಲಾದಲ್ಲಿ ಶಾಲೆಯ ಮೇಲ್ಛಾವಣಿ ಕುಸಿತ; ಐವರು ವಿದ್ಯಾರ್ಥಿಗಳಿಗೆ ಗಾಯ
ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಪಟ್ಟಣದ ಶಾಲೆಯೊಂದರಲ್ಲಿ ಮೇಲ್ಛಾವಣಿ ಕುಸಿದು ದುರ್ಘಟನೆ ಸಂಭವಿಸಿದೆ. ಅಂಕೋಲಾದ ಮುಕ್ಯ ಬಸ್ ನಿಲ್ದಾಣದ ಸಮೀಪವಿರುವ ನಿರ್ಮಲ ಹೃದಯ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಛಾವಣಿಯ ಮೇಲ್ಪದರ ಉದುರಿಬಿದ್ದಿದ್ದು, ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಸಫಲ್ ಡಿ ಚಿಂಚರಕರ, ಅಮೋಘ ನಾಯ್ಕ ಸುಹಾನಿ ಶೇಡಗೇರಿ, ಸೃಷ್ಟಿ ಎಸ್ ನಾಯ್ಕ ಹಾಗೂ ಒಂದನೇ ತರಗತಿಯ ವಿದ್ಯಾರ್ಥಿ ಸದ್ವಿನ್ ಡಿ ಚಿಂಚರಕರ ಗಾಯಗೊಂಡವರು.
ನಾಲ್ಕನೇ ತರಗತಿಯ ಕೋಣೆಯಲ್ಲಿ 68 ವಿದ್ಯಾರ್ಥಿಗಳಿದ್ದು, ಊಟದ ಸಮಯವಾಗಿದ್ದರಿಂದ 16 ವಿದ್ಯಾರ್ಥಿಗಳು ಮಾತ್ರ ವರ್ಗಕೋಣೆಯಲ್ಲಿ ಊಟ ಮಾಡುತ್ತಿದ್ದರು. ಊಟ ಮಾಡುತ್ತಿರುವ ವೇಳೆ ಮೇಲ್ಪದರ ಕುಸಿದಿದೆ. ಕಾಂಕ್ರೀಟ್ ಚೂರುಗಳು ಆಸುಪಾಸಿನಲ್ಲಿದ್ದ ವಿದ್ಯಾರ್ಥಿಗಳ ತಲೆಗೆ ಮತ್ತು ಬೆನ್ನಿಗೆ ಬಡಿದಿವೆ. ಮೇಲ್ಪದರ ಕುಸಿದ ಪರಿಣಾಮ ವರ್ಗಕೋಣೆಯ ಬೆಂಚುಗಳು ಮುರಿದು ಬಿದ್ದಿವೆ. ವಿದ್ಯಾರ್ಥಿಗಳು ಮೇಲ್ಪದರ ಕುಸಿದ ಜಾಗದಿಂದ ಸ್ವಲ್ಪ ದೂರದಲ್ಲಿ ಕುಳಿತ ಪರಿಣಾಮ ಹೆಚ್ಚಿನ ಅವಘಡ ಸಂಭವಿಸುವುದು ತಪ್ಪಿದೆ.