ನಾನೇ ಬಂದು ಎಸ್‌ಪಿ ಕಚೇರಿ ಮುಂದೆ ಧರಣಿ ಕೂರ್ತೀನಿ-ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ
ರಾಮನಗರ: ರೈತರಿಗೆ ಪೊಲೀಸರು ವಿಧಿಸುತ್ತಿರುವ ದಂಡದ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗಿಬಿದ್ದಿದ್ದಾರೆ. ಪೊಲೀಸರಿಗೆ 500 ರೂಪಾಯಿ ಬೆಲೆ ಏನು ಅಂತ ಗೊತ್ತೇನ್ರೀ..? ಅವರಿಗೇನು ಸುಮ್ಮನೆ ಬರುತ್ತಾ..? ಅನ್ನದಾತನಿಗೆ ಒಂದೊಂದು ರೂಪಾಯಿ ಕೂಡ ಎಷ್ಟು ಮುಖ್ಯ ಗೊತ್ತಾ..ಎಂದು ಪ್ರಶ್ನಿಸಿದ್ದಾರೆ. ದಂಡ ವಿಧಿಸುವುದು ಹೀಗೆ ಮುಂದುವರೆದರೆ ನಾನೇ ಬಂದು ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡ್ತೇನೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ರಾಮನಗರ ಎಸ್‌ಪಿ ಸಂತೋಷ್ ಬಾಬು ಇಲ್ಲಿಗೆ ಏಕೆ ಬಂದಿದ್ದಾನೆಂದು ನನಗೆ ಗೊತ್ತಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸರು ದಂಡ ವಿಧಿಸುವುದು ಹೆಚ್ಚಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಪ್ರತಿಕ್ರಿಯಿಸಿದ ಅವರು, ನಾನು ಅವನ ಬಳಿ ಮಾತನಾಡುವುದಿಲ್ಲ ನೀವೇ ಹೋಗಿ ಮಾತಾಡಿ ಪೊಲೀಸರಿಗೆ ಸರ್ಕಾರದಿಂದ ಸಿಗುವ ಸಂಬಳ ಸಾಕಾಗುವುದಿಲ್ಲವಾ..ಎಂದು ಕಿಡಿ ಕಾರಿದ್ದಾರೆ.
ಚನ್ನಪಟ್ಟಣದಲ್ಲಿಕೆಲಸ ಮಾಡಿಸುತ್ತಿರುವುದು ನಾನು ಆದರೆ ಸ್ಕೋಪ್ ತೆಗೆದುಕೊಳ್ಳುತ್ತಿರುವುದು ಬೇರೆಯವರು. ಇಲ್ಲಿನ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಇಂಜಿನಿಯರ್ ಕರೆದೊಯ್ದು ಕೆರೆ ವೀಕ್ಷಣೆ ಮಾಡಲಾಗಿದೆ. ಕೆಲಸ ಮಾಡಿಸ್ತಿರುವುದು ನಾನು, ಸ್ಕೋಪ್ ಬೇರೆಯವರದ್ದು. ಸಿ.ಪಿ. ಯೋಗೇಶ್ವರ್ ಸ್ಕೋಪ್ ತೆಗೆದುಕೊಳ್ಳಲು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.