ಪಾಟ್ನಾದಲ್ಲಿ ಭಾರಿ ಸ್ಫೋಟ; ಹನ್ನೊಂದು ಮಂದಿ ದುರ್ಮರಣ..!
ಪಾಟ್ನಾ: ಬಿಹಾರದ ಬಾಗಲ್‌ಪುರ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ. ಮನೆಯೊಂದರಲ್ಲಿ ಅಕ್ರಮವಾಗಿ ಬಾಂಬ್ ತಯಾರಿಸಲು ಸ್ಫೋಟಕ ಸಾಮಗ್ರಿಗಳನ್ನು ಇಟ್ಟಿದ್ದರು. ಇವು ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದ್ರೆ, ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಯಾಕೆ ಇಟ್ಟಿದ್ದರು ಎಂಬುದರ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಗುರುವಾರ ರಾತ್ರಿ ತಾತಾರ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಜ್‌ವಾಲಿ ಚಾಕ್ ಎಂಬ ಹಳ್ಳಿಯಲ್ಲಿ ಈ ದುರಂತ ನಡೆದಿದೆ. ಸ್ಪೋಟದ ತೀವ್ರತೆಗೆ ಘಟನಾ ಸ್ಥಳದಿಂದ 15 ಕಿಮೀ ದೂರದಲ್ಲಿರುವ ನಾಲ್ಕು ಮನೆಗಳು ಕುಸಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸಾವು ನೋವಿನ ಪ್ರಮಾಣ ಹೆಚ್ಚಾಗುವ ಸಂಭವವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಗಲ್‌ಪುರ್ ವಲಯದ ಡಿಜಿಪಿ ಹಾಗೂ ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‘ಅಕ್ರಮವಾಗಿ ನಾಡ ಬಾಂಬ್ ತಯಾರಿಸಲು ಇಟ್ಟಿದ್ದ ಸಲಕರಣೆಗಳು ಸ್ಫೋಟಿಸಿವೆ. ಇದೊಂದು ಭಾರೀ ಪ್ರಮಾಣದ ಸ್ಪೋಟ’ ಎಂದು ಡಿಜಿಪಿ ಸುಜಿತ್ ಕುಮಾರ್ ಹೇಳಿದ್ದಾರೆ.