International

ಉಕ್ರೇನ್‌ನ ಮುಂದಿನ ಅಧ್ಯಕ್ಷ ವಿಕ್ಟರ್‌ ಯನುಕೋವಿಚ್‌ ರನ್ನು ನೇಮಿಸ್ತಾರಾ ಪುಟಿನ್..?

ಉಕ್ರೇನ್:‌ ರಷ್ಯಾ ಎಚ್ಚರಿಕೆಯನ್ನು ಕಡೆಗಣಿಸಿ ನ್ಯಾಟೋ ಪಡೆಗಳಲ್ಲಿ ಸೇರಲು ಉಕ್ರೇನ್‌ ಸಿದ್ಧವಾಗಿದ್ದೇ ರಷ್ಯಾ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ರಷ್ಯಾ ಉಕ್ರೇನ್‌ ಮೇಲೆ ದಂಡೆತ್ತಿ ಹೋಗಿದೆ. ಇದಕ್ಕೆ ಜಲೆನ್‌ ಸ್ಕಿ ಭಾರೀ ಮೌಲ್ಯ ತೆರಬೇಕಾಗಿದೆ. ಈಗಾಗಲೇ ಪುಟಿನ್‌ ಉಕ್ರೇನ್‌ಗೆ ಮತ್ತೊಬ್ಬ ಅಧ್ಯಕ್ಷನನ್ನು ಘೋಷಣೆ ಮಾಡಲು ಸಿದ್ಧವಾಗಿದ್ದಾರೆ ಎಂದು ಉಕ್ರೇನ್‌ ಪತ್ರಿಕೆಯೊಂದು ವರದಿ ಮಾಡಿದೆ.

ಉಕ್ರೇನ್‌ನನ್ನು ವಶಪಡಿಸಿಕೊಂಡ ನಂತರ ಪುಟಿನ್ ವಿಕ್ಟರ್ ಯನುಕೋವಿಚ್ ಅವರನ್ನು ಅಧ್ಯಕ್ಷರಾಗಿ ಘೋಷಿಸಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.

ಯಾರು ಈ ವಿಕ್ಟರ್‌ ಯನುಕೋವಿಚ್..?‌

ವಿಕ್ಟರ್ ಯಾನುಕೋವಿಚ್ ಉಕ್ರೇನ್‌ನ ಮಾಜಿ ಅಧ್ಯಕ್ಷ,  2010 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ರು  ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ನಂತರ 2014 ರಲ್ಲಿ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲಾಯಿತು. ವಿಕ್ಟರ್ ಯುರೋಪಿಯನ್ ಯೂನಿಯನ್ (EU) ನೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿ, ರಷ್ಯಾದೊಂದಿಗೆ ನಿಕಟ ಸಂಬಂಧ ಬೆಳೆಸಲು ಮುಂದಾದ ಕಾರಣ ಯನುಕೋವಿಚ್ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳು ನಡೆದವು.

ಪುಟಿನ್ ಅವರ ನಿಕಟವರ್ತಿ ಎಂದು ಹೇಳಲಾದ ಯನುಕೋವಿಚ್ ಅವರನ್ನು ಮರಳಿ ಕರೆತರುವ ಪ್ರಯತ್ನಕ್ಕೆ ರಷ್ಯಾ ಬೆಂಬಲ ನೀಡಿದೆ.   2010ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲು ಯನುಕೋವಿಚ್ 2006-2007 ಮತ್ತು 2005 ಕ್ಕಿಂತ ಮೊದಲು ಉಕ್ರೇನ್‌ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಈ ಹಿಂದೆ 1997 ರಿಂದ 2002 ರವರೆಗೆ ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಒಬ್ಲಾಸ್ಟ್‌ನ ಗವರ್ನರ್ ಆಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಡೊನೆಟ್ಸ್ಕ್ ಪ್ರದೇಶವನ್ನು ಸ್ವತಂತ್ರ್ಯವಾಗಿ ಘೋಷಿಸಿರುವುದು ಎಲ್ಲರಿಗೂ ತಿಳಿದಿದೆ.

 

Share Post