ರಷ್ಯಾ-ಉಕ್ರೇನ್ ಯುದ್ಧ: ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮಾರ್ಚ್ 7/8ರಂದು ವಿಚಾರಣೆ
ಹೇಗ್: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಎಲ್ಲ ಪಾಶ್ಚಿಮಾತ್ಯ ದೇಶಗಳ ವಿರೋಧವಿದ್ದರೂ ಕೂಡ ರಷ್ಯಾ ದಾಳಿಯನ್ನು ನಿಲ್ಲಿಸುತ್ತಿಲ್ಲ. ರಷ್ಯಾ ಪರಮಾಣು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಂತೆ ಉಕ್ರೇನ್ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ. ರಷ್ಯಾದ ಆಕ್ರಮಣದ ಬಗ್ಗೆ ಉಕ್ರೇನ್ ಈಗಾಗಲೇ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ದೂರು ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕುರಿತು ಐಸಿಜೆ ವಿಚಾರಣೆ ನಡೆಸಲು ಮುಂದಾಗಿದೆ. ಈ ತಿಂಗಳ 7 ಮತ್ತು 8 ರಂದು ವಿಚಾರಣೆ ನಡೆಸುವುದಾಗಿ ಐಸಿಜೆ ಹೇಳಿದೆ. ಉಕ್ರೇನ್‌ನಲ್ಲಿ ಏಳು ದಿನಗಳಿಂದ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಹಲವು ನಾಗರಿಕರು ಸಾವನ್ನಪ್ಪಿದ್ದಾರೆ ಜೊತೆಗೆ ಕೀವ್ ನಗರದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡಿದ್ದಾರೆ. ಅಂತರಾಷ್ಟ್ರೀಯ ನ್ಯಾಯಾಲಯವು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪದಡಿ ವಿಚಾರಣೆ ನಡೆಸಲು ಸಿದ್ಧವಾಗಿದೆ.
ಐಸಿಜೆ ಪ್ರಾಸಿಕ್ಯೂಟರ್ ಕರೀಂ ಖಾನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಉಕ್ರೇನ್ ಸಲ್ಲಿಸಿರುವ ಅರ್ಜಿಯು ಸಮಗ್ರ ತನಿಖೆಗೆ ಅರ್ಹವಾಗಿದೆ ಎಂದು ಕರೀಂ ಖಾನ್ ಹೇಳಿದ್ದಾರೆ. ಎರಡು ದೇಶಗಳು ಯುದ್ಧಾಪರಾಧಗಳ ಬಗ್ಗೆ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿವೆ ಎಂದರು. ಯುದ್ಧದ ಮೂರನೇ ದಿನದಂದು ಉಕ್ರೇನ್ ಸರ್ಕಾರವು ಅಂತರರಾಷ್ಟ್ರೀಯ ನ್ಯಾಯಾಲಯವನ್ನು ಸಂಪರ್ಕ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ರಷ್ಯಾದ ವಿರುದ್ಧ ಮತ್ತಷ್ಟು ನಿರ್ಬಂಧಗಳನ್ನು ಕೋರಿ ಉಕ್ರೇನ್ ಐಸಿಜಿಗೆ ಅರ್ಜಿ ಸಲ್ಲಿಸಿದೆ. ರಷ್ಯಾ ಕೂಡಲೇ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದೆ.