International

UKRAINE WAR; ಸಂಜೆ ವೇಳೆಗೆ ಮುಂಬೈಗೆ ಬರಲಿದೆ ಏರ್‌ ಇಂಡಿಯಾ ವಿಮಾನ

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್‌ ಕರೆತರಲಾಗುತ್ತಿದೆ. ಈಗಾಗಲೇ ಒ೦ದು ವಿಮಾನ ರೊಮಾನಿಯಾದಿಂದ ಟೇಕಾಫ್‌ ಆಗಿದೆ. ಸಂಜೆ ವೇಳೆಗೆ ಈ ವಿಮಾನ ಮುಂಬೈ ತಲುಪಲಿದೆ ಎಂದು ಹೇಳಲಾಗಿದೆ.

     ರಷ್ಯಾ ಮಿಲಿಟರಿ ಪಡೆ ಉಕ್ರೇನ್‌ ಮೇಲೆ ಯುದ್ಧ ಸಾರಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವ ಭಾರತದ ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. ಭಾರತ ಸರ್ಕಾರವೇ ಮುತುವರ್ಜಿ ವಹಿಸಿ, ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಇಂದು ಬೆಳಗ್ಗೆ ಮುಂಬೈನಿಂದ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರೊಮಾನಿಯಾದ ಬುಕಾರೆಸ್ಟ್‌ ವಿಮಾನ ನಿಲ್ದಾಣ ತಲುಪಿತ್ತು. ಅಲ್ಲಿಗೆ ಬಸ್‌ಗಳ ಮೂಲಕ ಭಾರತದ ವಿದ್ಯಾರ್ಥಿಗಳು ಆಗಮಿಸಿದ್ದರು. ಈಗ ಅವರನ್ನು ಹೊತ್ತು ತರುತ್ತಿದೆ ವಿಮಾನ.

ಇಂದು ಸಂಜೆ ವೇಳೆ ಆ ವಿಮಾನ ಮುಂಬೈ ತಲುಪಲಿದೆ. ಉಕ್ರೇನ್​ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಭಾರತೀಯರ ಕೋವಿಡ್​ ತಪಾಸಣೆಗಾಗಿ ನಿಲ್ದಾಣದಲ್ಲಿ ವಿಶೇಷ ಕಾರಿಡಾರ್​ ರೂಪಿಸಲಾಗಿದೆ. ವಿಮಾನ ಲ್ಯಾಂಡ್​ ಆದ ಬಳಿಕ ಕೋವಿಡ್​ ತಪಾಸಣೆ ನಡೆಸುವ ಅಗತ್ಯವಿರುವ ಕಾರಣ ಈ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇನ್ನು ಮತ್ತೊಂದು ವಿಮಾನ ದೆಹಲಿಯಿಂದ ಹಂಗೇರಿಯ ಬುಡಾಪೆಸ್ಟ್‌ ವಿಮಾನ ನಿಲ್ದಾಣ ತಲುಪಿದೆ. ಅಲ್ಲಿಗೆ ಉಕ್ರೇನ್‌ನಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅವರು ಬಂದ ಮೇಲೆ ಆ ವಿಮಾನವೂ ಕೂಡಾ ಭಾರತದ ಕಡೆ ಪ್ರಯಾಣ ಬೆಳೆಸಲಿದೆ.

Share Post