International

ಭಾರತದ ವಿದ್ಯಾರ್ಥಿಗಳು ಮೆಡಿಕಲ್‌ ಓದಲು ಉಕ್ರೇನ್‌ ಯಾಕೆ ಆಯ್ಕೆ ಮಾಡ್ತಾರೆ..?

ಕೀವ್‌; ರಷ್ಯಾ ಮಿಲಿಟರಿ ಪಡೆ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿದೆ. ಇದ್ರಿಂದಾಗಿ ಭಾರತದ ಅನೇಕರು ಭೀತಿಯಲ್ಲಿದ್ದಾರೆ. ಯಾಕೆಂದ್ರೆ, ಭಾರತದ ಅನೇಕ ವಿದ್ಯಾರ್ಥಿಗಳು ಮೆಡಿಕಲ್‌ ಓದಲು ಉಕ್ರೇನ್‌ನಲ್ಲಿ ನೆಲೆಸಿದ್ದಾರೆ. ಉಕ್ರೇನ್‌ನ ಶಿಕ್ಷಣ ಹಾಗೂ ವಿಜ್ಞಾನ ಸಚಿವಾಲಯದ ಅಧಿಕೃತ ಮಾಹಿತಿ ಪ್ರಕಾರ 18,095 ಭಾರತೀಯ ವಿದ್ಯಾರ್ಥಿಗಳು ಇಲ್ಲಿ ಮೆಡಿಕಲ್‌ ಓದುತ್ತಿದ್ದಾರೆ. ಅದರಲ್ಲಿ ದೆಹಲಿ, ಪಂಜಾಬ್‌ ಹಾಗೂ ಹರಿಯಾಣ ರಾಜ್ಯಗಳ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ.

ಮೆಡಿಕಲ್‌ ಓದಲು ಉಕ್ರೇನ್‌ ಆಯ್ಕೆ ಮಾಡಿಕೊಳ್ಳುವುದೇಕೆ..?

ಭಾರತದಲ್ಲಿ ಅನೇಕ ಮೆಡಿಕಲ್‌ ಕಾಲೇಜುಗಳಿವೆ. ನೀಟ್‌ ಪರೀಕ್ಷೆ ಬರೆದು ಮೆಡಿಕಲ್‌ ಸೀಟ್‌ ಗಿಟ್ಟಿಸಿಕೊಳ್ಳಲು ಅವಕಾಶಗಳಿವೆ. ಜೊತೆಗೆ ಮೀಸಲಾತಿಯಡಿಯಲ್ಲೂ ಮೆಡಿಕಲ್‌ ಸೀಟ್‌ಗಳನ್ನು ನೀಡಲಾಗುತ್ತಿದೆ. ಹೀಗಿದ್ದರೂ ಯಾಕೆ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ ದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಏಳುತ್ತದೆ.  ಇದಕ್ಕೆ ಕಾರಣ ಕಡಿಮೆ ಖರ್ಚಿನಲ್ಲಿ ಮೆಡಕಲ್‌ ಓದಬಹುದು ಅನ್ನೋದು. ಹೌದು, ಭಾರತದಲ್ಲಿ ನಾಲ್ಕೂವರೆ ವರ್ಷದ ಎಂಬಿಬಿಎಸ್‌ ಕೋರ್ಸ್‌ ಮಾಡಲು ಒಬ್ಬ ವಿದ್ಯಾರ್ಥಿ ವಾರ್ಷಿಕವಾಗಿ 10 ರಿಂದ 12 ಲಕ್ಷ ರೂಪಾಯಿ ಶುಲ್ಕ ಭರಿಸಬೇಕಾಗುತ್ತದೆ. ಖಾಸಗಿ ಕಾಲೇಜಿನಲ್ಲಾದರೆ ವರ್ಷಕ್ಕೆ ಕನಿಷ್ಠ 50 ಲಕ್ಷ ರೂಪಾಯಿ ಶುಲ್ಕ ಪಾವತಿಸಬೇಕಿರುತ್ತದೆ. ಇಷ್ಟೆಲ್ಲಾ ಖರ್ಚು ಮಾಡ್ತೀವಿ ಅಂದರೂ ಭಾರತದಲ್ಲಿ ಸೀಟು ಸಿಗೋದು ಕಷ್ಟ ಕಷ್ಟ. ಅದ್ರಲ್ಲೂ ಹರಿಯಾಣ, ಪಂಜಾಬ್‌ಗಳಲ್ಲಿ ಮೆಡಿಕಲ್‌ ಕಾಲೇಜುಗಳ ಸಂಖ್ಯೆ ತುಂಬಾನೇ ಕಡಿಮೆ ಇದೆ. ಪಂಜಾಬ್‌ನಲ್ಲಿ ಕೇವಲ ನಾಲ್ಕು ಮೆಡಿಕಲ್‌ ಕಾಲೇಜುಗಳಿವೆ. ಆರು ಖಾಸಗಿ ಮೆಡಕಲ್‌ ಕಾಲೇಜುಗಳಿವೆ ಅಷ್ಟೇ. ಖಾಸಗಿ ಕಾಲೇಜುಗಳಲ್ಲಿ ಆರು ಪಟ್ಟು ಹೆಚ್ಚು ಶುಲ್ಕವಿದೆ.

ಇನ್ನು ಇಲ್ಲಿನ ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ಹೋಗಿ ಎಂಬಿಬಿಎಸ್‌ ಓದಬೇಕೆಂದರೆ ಸಾಕಷ್ಟು ಖರ್ಚಾಗುತ್ತದೆ. ಜೊತೆಗೆ ಸೀಟು ಸಿಗುವುದು ಕೂಡಾ ಕಷ್ಟ. ಹೀಗಾಗಿ ಭಾರತದಲ್ಲಿ ಮೆಡಿಕಲ್‌ ಸೀಟು ಸಿಗದವರು ಉಕ್ರೇನ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಉಕ್ರೇನ್‌ನಲ್ಲಿ ಎಂಬಿಬಿಎಸ್‌ ಕೋರ್ಸ್‌ಗೆ ವರ್ಷಕ್ಕೆ ಕೇವಲ 4-5 ಲಕ್ಷ ರೂಪಾಯಿ ಶುಲ್ಕವಿದೆ. ಭಾರತಕ್ಕೆ ಹೋಲಿಸಿಕೊಂಡದರೆ ಅದು ಮೂರರಿಂದ ನಾಲ್ಕು ಪಟ್ಟು ಕಡಿಮೆ. ಇದರ ಜೊತೆಗೆ ಹಾಸ್ಟೆಲ್‌ ಬಾಡಿಗೆ, ಇನ್ನಿತರೆ ಖರ್ಚುಗಳು ಕೂಡಾ ಕಡಿಮೆ ಇವೆ.

ಉಕ್ರೇನ್‌ನಲ್ಲಿ ಭಾರತದಂತೆಯೇ ವಿದ್ಯಾರ್ಥಿಗಳಿಗೆ ವ್ಯಾಪಕವಾದ ಪ್ರಾಯೋಗಿಕ ಮಾನ್ಯತೆ ಇದೆ. ಜೊತೆಗೆ ಉಕ್ರೇನ್‌ನಲ್ಲಿ ಪಡೆಯುವ ಎಂಬಿಬಿಎಸ್‌ ಪದವಿಗೆ ಜಾಗತಿಕವಾಗಿ ಮಾನ್ಯತೆ ಇದೆ. ಇನ್ನು ಭಾರತಕ್ಕೆ ಹೋಲಿಸಿಕೊಂಡರೆ ಉಕ್ರೇನ್‌ನ ವೈದ್ಯಕೀಯ ಕಾಲೇಜುಗಳು ಉತ್ತಮ ಮೂಲಸೌಕರ್ಯವನ್ನು ಹೊಂದಿವೆ.  ಉತ್ತಮ ಪ್ರಾಯೋಗಿಕ ಲ್ಯಾಬ್‌ಗಳಿವೆ. ಹೀಗಾಗಿ ಎಲ್ಲರೂ ಉಕ್ರೇನ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಉಕ್ರೇನ್‌ನಲ್ಲಿ ಮೆಡಿಕಲ್‌ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯರದ್ದೇ ಸಿಂಹಪಾಲು. ಇಲ್ಲಿನ ವಿದೇಶಿ ವಿದ್ಯಾರ್ಥಿಗಳ ಪೈಕಿ ಶೇ.23.64ರಷ್ಟು ವಿದ್ಯಾರ್ಥಿಗಳು ಭಾರತೀಯರೇ ಆಗಿದ್ದಾರೆ. ಇದು ಉಕ್ರೇನ್‌ ಸಚಿವಾಲಯವೇ ನೀಡಿರುವ ಅಧಿಕೃತ  ಮಾಹಿತಿ.

 

Share Post