ಕಾಂಗ್ರೆಸ್, ಬಿಜೆಪಿಯಿಂದ ರಾಜ್ಯದ ಪ್ರತಿಷ್ಠೆಗೆ ಕೊಳ್ಳಿ; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ಉಂಟಾಗುತ್ತಿರುವ ಅಶಾಂತಿಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ವಿಕೃತ ಕೇಕೆ ಹಾಕುತ್ತಿವೆ ಎಂದು ಕಿಡಿ ಕಾರಿದ್ದಾರೆ. ಈ ಬಗ್ಗೆ ಅವರು ಇಂದು ಬೆಳಗ್ಗೆಯಿಂದ ಸರಣಿ ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಮಾಡಿರುವ ಸರಣಿ ಟ್ವೀಟ್ಗಳ ವಿವರ ಇಲ್ಲಿದೆ.
ʻರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ʼವಿಕೃತ ಕೇಕೆʼ ಹಾಕುತ್ತಿವೆ.ʼ
ʻಸಾವಿನ ಮನೆಯಲ್ಲಿ ಮತಫಸಲು ತೆಗೆಯುವ ನಿರ್ಲಜ್ಜ ನಡೆ ಅಸಹನೀಯ. ಶಾಂತಿಯನ್ನು ಕದಡಿದ ಪಾಪ ಸುಮ್ಮನೆ ಬಿಡುವುದಿಲ್ಲ. ಹಚ್ಚಹಸರಿನ ನಿರ್ಮಲ ಮಲೆನಾಡಿನಲ್ಲಿ ಹೊತ್ತಿ ಉರಿಯುತ್ತಿರುವ ʼದ್ವೇಷದಳ್ಳುರಿʼ ಇಡೀ ರಾಜ್ಯಕ್ಕೇ ಶಾಪವಾಗಿ ಪರಿಣಮಿಸಲಿದೆ.ʼ
ʻರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಬೇಕು. ಅವರು ಯಾರ ಕೈಗೊಂಬೆಯೂ ಆಗಬಾರದು ಎಂದು ನಾನು ಮತ್ತೊಮ್ಮೆ ಆಗ್ರಹಿಸುತ್ತಿದ್ದೇನೆ. ಶಾಂತಿ-ಭದ್ರತೆ ನಿರ್ವಹಣೆಯಲ್ಲಿ ವಿಫಲವಾಗಿರುವ ಸರಕಾರಕ್ಕೆ ರಾಜ್ಯಪಾಲರು ಕಿವಿ ಹಿಂಡಲೇಬೇಕು ಎಂಬುದು ನನ್ನ ಒತ್ತಾಯ.ʼ
ಹೀಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.