ಕಾಂಗ್ರೆಸ್ ವಿರೋಧ ಪಕ್ಷವಾಗಿ ವಿಫಲವಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಆಡಳಿತ ಪಕ್ಷವಾಗಿ ನೀವು ಕೆಲಸ ಮಾಡಲು ಯೋಗ್ಯರಲ್ಲ ಎಂದು ಜನ 2018 ರಲ್ಲಿ ತೀರ್ಮಾನ ಮಾಡಿದರು. ಕನಿಷ್ಠ ವಿರೋಧ ಪಕ್ಷವಾಗಿಯಾದರೂ ಕಾಂಗ್ರೆಸ್ ಪಕ್ಷ ಕೆಲಸ ಮಾಡಬೇಕಿತ್ತು. ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ರಾಜಕಾರಣದ ಮುಸುಕು ಅವರ ಹಾಗೂ ಅವರ ಪಕ್ಷದ ಮೇಲೆ ಬಿದ್ದಿದೆ. ಎಲ್ಲವನ್ನೂ ರಾಜಕೀಯವಾಗಿ ನೋಡುವುದು, ಧ್ವೇಷದಿಂದ ನೋಡುವುದರಿಂದ ಅವರಿಗಾಗಲಿ, ಅವರ ಪಕ್ಷಕ್ಕಾಗಲಿ ರಾಜಕೀಯ ಭವಿಷ್ಯವಿಲ್ಲ. ಸದನ ಶುಕ್ರವಾರದ ವರೆಗೂ ನಡೆಯಬೇಕಿತ್ತು. ಸದನವನ್ನು ಇಂದೇ ಮೊಟಕುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ಬೇಸರದ ಸಂಗತಿ. ವಿರೋಧ ಪಕ್ಷದವರು ಸದನ ಕರೆಯಿರಿ ಚರ್ಚಿಸಬೇಕು ಎನ್ನುತ್ತಾರೆ. ಅಧಿವೇಶನ ನಡೆಯುವಾಗ ಚರ್ಚೆ ಮಾಡಲು ಅವರು ತಯಾರಿಲ್ಲ. ಯಾವುದೇ ವಿಚಾರವನ್ನೇ ಆಗಲಿ ಚರ್ಚೆ ಹಾಗೂ ವಾದ ಮಾಡಬಹುದು. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಸರ್ಕಾರದ ಸಾಧನೆಯನ್ನು ಹೇಳಿಕೊಂಡಾಗ ಅದರ ನ್ಯೂನ್ಯತೆ ಗಳನ್ನು ಹೇಳಬಹುದಾಗಿತ್ತು. ಆ ಕರ್ತವ್ಯವನ್ನೂ ಅವರು ಮಾಡಲಿಲ್ಲ.
ಧರಣಿ ಮಾರ್ಗದ ಮುಖಾಂತರ ರಾಜ್ಯದ ಜನತೆ ಹಾಗೂ ಸದನದ ದಾರಿಯನ್ನು ತಪ್ಪಿಸಲು ನೋಡುತ್ತಿದ್ದಾರೆ. ವಸ್ತ್ರ ಸಂಹಿತೆಯ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಗಂಭೀರವಾದ ಚರ್ಚೆ ನಡೆಯುತ್ತಿದೆ. ಈಗಾಗಲೇ ಮಧ್ಯಂತರ ಆದೇಶ ನೀಡಿದೆ. ಅದರ ಅನುಷ್ಠಾನವಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ಗೊಂದಲಗಳನ್ನು ಸೃಷ್ಟಿ ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲರೂ ಒಕ್ಕೊರಲಿನ ಸಂದೇಶವನ್ನು ನೀಡೋಣ, ಅಂತಿಮ ಆದೇಶ ಬರುವವರೆಗೂ ಕಾದು, ಶಾಂತಿಯಿಂದ ಇರಬಹುದಾಗಿತ್ತು. ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ಪರೀಕ್ಷೆಗಳಿವೆ ಎಂಬ ಕನಿಷ್ಠ ಸಂದೇಶವನ್ನು ಕೊಡಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ. ಮಾನವೀಯತೆ ವಿಚಾರವನ್ನೇ ಇಟ್ಟುಕೊಂಡಿಲ್ಲ. ರಾಜಕಾರಣವೇ ಪ್ರಮುಖವಾಗಿದೆ. ರಾಜಕಾರಣದಲ್ಲೂ ಕೂಡ ವಿರೋಧ ಪಕ್ಷದ ನಾಯಕರು, ಕಾಂಗ್ರೆಸ್ ಅಧ್ಯಕ್ಷರು, ಹಿರಿಯರು. ಬಹಳ ವರ್ಷಗಳಿಂದ ರಾಜಕಾರಣದಲ್ಲಿರುವವರು. ಅವರ ಅನುಭವ ಎಲ್ಲಿ ಹೋಯಿತು. ಅವರ ಅನುಭವದಿಂದ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದರೆ, ಜನ ಮೆಚ್ಚಿಕೊಳ್ಳುತ್ತಿದ್ದರು ಎಂದರು.
ಹೇಳಿಕೆ ತಿರುಚಿ ರಾಜಕೀಯವಾಗಿ ಬಳಸಲು ಪ್ರಯತ್ನ
ಜೆ.ಪಿ ನಡ್ಡಾ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ CM ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಅಧಿಕೃತ ಮಾಹಿತಿ ಪಡೆದುಕೊಳ್ಳುತ್ತೇನೆ.
ಈಶ್ವರಪ್ಪ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಹೇಳಿಕೆಯ ಪೂರ್ಣ ಪಾಠವನ್ನು ತೆಗೆದುಕೊಂಡರೆ, ಅವರು ಯಾವುದೇ ಕಾನೂನಿನ ವಿರುದ್ಧವಾಗಲಿ, ರಾಷ್ಟ್ರಧ್ವಜವನ್ನು ಅಪಮಾನ ಮಾಡುವ ಯಾವುದೇ ವಿಚಾರವನ್ನು ಅವರು ಹೇಳಿಲ್ಲ. ಇದು ಬಹಳ ಸ್ಪಷ್ಟವಾಗಿದೆ. ಅದನ್ನು ತಿರುಚಿ ರಾಜಕೀಯವಾಗಿ ಬಳಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದರು.