BengaluruPolitics

ಹಿಜಾಬ್‌ ನಿಷೇಧ ವಾಪಸ್‌ ವಿಚಾರ; ಇದು ವೋಟ್‌ಬ್ಯಾಂಕ್‌ ರಾಜಕಾರಣವೇ..?

ಮುಸ್ಲಿಂ ಓಲೈಕೆ ರಾಜಕಾರಣಕ್ಕೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅವಿನಾಭಾವ ನಂಟು. ಒಂದಿಲ್ಲೊಂದು ರೀತಿಯಲ್ಲಿ ಮುಸ್ಲಿಮರ ಓಲೈಕೆ ಮಾಡಿಕೊಂಡು ಮುಸ್ಲಿಂ ವೋಟ್‌ ಬ್ಯಾಂಕ್‌ ಭದ್ರಪಡಿಸಿಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಲೇ ಬಂದಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಲೋಕಸಭಾ ಚುನಾವಣೆಗೆ ಎಲ್ಲರೂ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ತಮ್ಮ ಮುಸ್ಲಿಂ ಟ್ರಂಪ್‌ಕಾರ್ಡ್‌ ಪ್ಲೇ ಮಾಡಿದ್ದಾರೆ. ಎಲ್ಲರೂ ಮರೆತೇ ಹೋಗಿದ್ದ ಹಿಜಾಬ್‌ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹಿಜಾಬ್‌ ವಿವಾದ ಭುಗಿಲೆದಿತ್ತು. ಉಡುಪಿ ಜಿಲ್ಲೆಯಲ್ಲಿ ನಾಲ್ಕೈದು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬರುವುದನ್ನು ತಡೆಯಲಾಗಿತ್ತು. ಇದು ದೇಶಾದ್ಯಂತ ಸುದ್ದಿಯಾಗಿತ್ತು. ಅನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಅಧಿಕೃತವಾಗಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ನಿಷೇಧ ಹೇರಿತ್ತು. ಆ ಸಂದರ್ಭದಲ್ಲಿ ಸಾಕಷ್ಟು ಬಿಸಿಯೇರಿದ್ದ ಈ ವಿಚಾರ ಈಗ ಕೋರ್ಟ್‌ ಕಟಕಟೆಯಲ್ಲಿದೆ. ಆದ್ರೆ, ವಿವಾದವನ್ನು ಎಲ್ಲರೂ ಮರೆತೇ ಹೋಗಿದ್ದರು. ಇಂತಹ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ಹಿಜಾಬ್‌ ವಿಚಾರ ಎತ್ತಿದ್ದಾರೆ. ಮೈಸೂರು ಜಿಲ್ಲೆ ನಂಜಗೂಡು ತಾಲ್ಲೂಕಿನಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಹಿಜಾಬ್‌ ನಿಷೇಧ ವಾಪಸ್‌ ಪಡೆಯಲು ಅಧಿಕಾರಿಗಳಿಗೆ ಸೂಚಿಸಿರೋದಾಗಿ ಹೇಳಿದ್ದಾರೆ. ಈ ಹಿಂದಿನ ಕೋಮುವಾದಿ ಬಿಜೆಪಿ ಸರ್ಕಾರ ಹಿಜಾಬ್‌ಗೆ ನಿಷೇಧ ಹೇರಿತ್ತು. ಅದು ಸರಿಯಲ್ಲ. ಹೀಗಾಗಿ ವಾಪಸ್‌ ಪಡೆಯಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕರು ಈ ವಿಚಾರ ಮುಂದಿಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಸಿದ್ದರಾಮಯ್ಯ ಅವರು ಧರ್ಮದ ಹೆಸರಿನಲ್ಲಿ ಯುವ ಮನಸ್ಸುಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಕೂಡಾ ಸಿದ್ದರಾಮಯ್ಯ ಅವರ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್‌.ಅಶೋಕ್‌ ಕೂಡಾ ಸಿದ್ದರಾಮಯ್ಯ ಅವರ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಹೀಗಿರುವಾಗಲೇ ದೆಹಲಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು, ಸಿದ್ದರಾಮಯ್ಯ ಅವರು ಷರಿಯಾ ಕಾನೂನು ಜಾರಿಗೆ ತರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಕಾಂಗ್ರೆಸ್‌ ಪಕ್ಷ ಮೊದಲಿನಿಂದಲೂ ಮುಸ್ಲಿಂ ಓಲೈಕೆ ಮಾಡಿಕೊಂಡೇ ಬಂದಿದೆ. ಇತ್ತ ಸಿದ್ದರಾಮಯ್ಯ ಅವರು ಕೂಡಾ ಮುಸ್ಲಿಂ ಕೊಂಚ ಹೆಚ್ಚೇ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಸ್ಲಿಮರಿಗಾಗಿ ಹಲವಾರು ಯೋಜನೆಗಳನ್ನು ಕೂಡಾ ಜಾರಿ ಮಾಡಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಬೆಳಗಾವಿ ಚಳಗಾಲದ ಅಧಿವೇಶನ ಶುರುವಾದ ಮೊದಲ ದಿನವೇ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯಕ್ಕೆ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂಪಾಯಿ ಮೀಸಲಿಡೋದಾಗಿ ಘೋಷಣೆ ಮಾಡಿದ್ದರು. ಇದರ ವಿರುದ್ಧವೂ ಬಿಜೆಪಿ ನಾಯಕರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು.

ಹೀಗಿರುವಾಗಲೇ ಕಾಂಗ್ರೆಸ್‌ ಶಾಸಕ ಪ್ರಸಾದ್‌ ಅಬ್ಬಯ್ಯ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ಹೆಸರಿಡಬೇಕು ಎಂದು ಕಲಾಪದಲ್ಲಿ ಹೇಳಿದ್ದರು. ಇದಕ್ಕೆ ಪ್ರಿಯಾಂಕ್‌ ಖರ್ಗೆ, ಮಹದೇವಪ್ಪ ಸೇರಿ ಹಲವು ಸಚಿವರು ಸಹಮತ ವ್ಯಕ್ತಪಡಿಸಿದ್ದರು. ವಿಮಾನ ನಿಲ್ದಾಣಕ್ಕೆ ಮೈಸೂರು ಒಡೆಯರ್‌ ರಾಜಮನೆತನದವರ ಹೆಸರಿಡಬೇಕೆಂಬ ಕೂಗಿನ ನಡುವೆ ಟಿಪ್ಪು ಸುಲ್ತಾನ್‌ ಹೆಸರಿಡಬೇಕೆಂಬ ಕೂಗು ಹಬ್ಬಿಸಿದ್ದು ಕಾಂಗ್ರೆಸ್‌ ನಾಯಕರು. ಇದೂ ಕೂಡಾ ಮುಸ್ಲಿಂ ಓಲೈಕೆ ರಾಜಕಾರಣ ಎಂಬ ಆರೋಪ ಕೇಳಿಬಂದಿತ್ತು. ಹೀಗಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರು ಅದೇ ಮೈಸೂರು ನೆಲದಲ್ಲಿ ನಿಂತು ಹಿಜಾಬ್‌ ನಿಷೇಧ ವಾಪಸ್‌ ಪಡೆಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯ ಇಂತಹ ತೀರ್ಮಾನ ಮಾಡಿರುವುದು ಓಲೈಕೆ ರಾಜಕಾರಣ ಅಲ್ಲದೆ ಮತ್ತೇನು ಅಂತ ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ.

ಇನ್ನು ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದಾಲೂ ಮುಸ್ಲಿಮರಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿ ಅವರ ಓಲೈಕೆ ಪ್ರಯತ್ನ ಮಾಡಿದ್ದರು. ಮುಸ್ಲಿಂರ ಮದುವೆ ಕಾರ್ಯಕ್ರಮಗಳಿಗೆ ಹಣಕಾಸಿನ ನೆರವು ಒದಗಿಸುವ ಶಾದಿ ಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಜಾರಿಗೆ ತಂದರು. ಟಿಪ್ಪು ಸುಲ್ತಾನ್‌ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವ ತೀರ್ಮಾನ ಕೈಗೊಂಡಿದ್ದು ಕೂಡಾ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಇದಲ್ಲದೆ, ಮೆಕ್ಕಾ ಯಾತ್ರೆ ಕೈಗೊಳ್ಳುವವರಿಗೆ ಹಣಕಾಸಿನ ನೆರವು, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಅಲ್ಪಸಂಖ್ಯಾತರಿಗೆ ಸ್ಕಾಲರ್‌ಶಿಪ್‌ನಂತಹ ಹಲವು ಯೋಜನೆಗಳನ್ನು ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದರು. ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ತೀವ್ರ ವಿರೋಧವಿದ್ದರೂ ಅದನ್ನು ನಡೆಯುವಂತೆ ನೋಡಿಕೊಂಡಿದ್ದರು.

ಇನ್ನು ಸಿದ್ದರಾಮಯ್ಯ ಅವರು ಮುಸ್ಲಿಂ ನಾಯಕರನ್ನು ಮೊದಲಿನಿಂದಲೂ ತಮ್ಮ ಆಪ್ತವಲಯದಲ್ಲಿಟ್ಟುಕೊಂಡು ಬೆಳೆಸುತ್ತಾ ಬಂದಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ಅತ್ಯಂತ ಆಪ್ತವಲಯದಲ್ಲಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಹೋಗಿದ್ದರು. ಈ ವೇಳೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿ ಬರಲು ಐಶಾರಾಮಿ ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು. ಇನ್ನು ಈ ಹಿಂದೆ ಸಿ.ಎಂ.ಇಬ್ರಾಹಿಂ, ರೋಶನ್‌ ಬೇಗ್‌ ಮುಂತಾದ ಮುಸ್ಲಿಂ ನಾಯಕರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡು ರಾಜ್ಯ ಮಟ್ಟದಲ್ಲಿ ಬೆಳೆದಿದ್ದನ್ನು ನಾವು ನೋಡಬಹುದು.

ಒಟ್ಟಿನಲ್ಲಿ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಹಿಜಾಬ್‌ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಇದು ಕಾಂಗ್ರೆಸ್‌ಗೆ ವರವಾಗುತ್ತೋ ಶಾಪವಾಗುತ್ತೋ ಗೊತ್ತಿಲ್ಲ. ಆದ್ರೆ, ಇದು ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿರುವುದಂತೂ ನಿಜ.

Share Post