NationalUncategorized

Hijab Row: ಹಿಜಾಬ್‌ ವಿವಾದದ ಬಗ್ಗೆ ಮೌನ ಮುರಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ

ದೆಹಲಿ: ಸುಮಾರು ಒಂದು ತಿಂಗಳಿನಿಂದ ಕರ್ನಾಟಕದಲ್ಲಿ ಹಿಜಾಬ್ ವಿವಾದ ಜೋರಾಗಿದೆ. ಪಕ್ಕದ ರಾಜ್ಯಗಳಲ್ಲೂ ಕಿಚ್ಚು ಆವರಿಸಿ ರಾಜಕೀಯ ರಣರಂಗವಾಗುತ್ತಿದೆ. ಆದರೆ ಇದುವರೆಗೂ ಕೇಂದ್ರ ಬಿಜೆಪಿ ನಾಯಕರು ಹಿಜಾಬ್ ವಿವಾದದ ಬಗ್ಗೆ ಬಾಯಿ ತೆರೆದಿಲ್ಲ.  ಆದರೆ ಮೊನ್ನೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್‌ ವಿಚಾರದ ಬಗ್ಗೆ ಅಮಿತ್ ಶಾ ಕುತೂಹಲಕಾರಿ ವಿಚಾರಗಳನ್ನು ತಿಳಿಸಿದ್ದಾರೆ.

‘ವಿದ್ಯಾರ್ಥಿಗಳು ಧಾರ್ಮಿಕ ವಸ್ತ್ರಗಳನ್ನು ಧರಿಸುವುದಕ್ಕಿಂತ ಸಮವಸ್ತ್ರ ಧರಿಸಿ ಶಾಲಾ-ಕಾಲೇಜಿಗೆ ಹೋಗುವುದು ಉತ್ತಮ’ ಎಂದು ಪ್ರತಿಕ್ರಿಯಿಸಿದ್ದಾರೆ.  “ಎಲ್ಲಾ ಧರ್ಮದ ಜನರು ಶಾಲೆಯ ಡ್ರೆಸ್ ಕೋಡ್ ಅನ್ನು ಒಪ್ಪಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ನಂಬಿಕೆ, ಈ ವಿಷಯ ಈಗ ನ್ಯಾಯಾಲಯದಲ್ಲಿದೆ. ಈ ಕುರಿತು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಹಿಜಾಬ್ ಬಗ್ಗೆ ನ್ಯಾಯಮಂಡಳಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಎಲ್ಲರೂ ಅನುಸರಿಸಬೇಕು ಎಂದರು.

‘ವಿದ್ಯಾರ್ಥಿಗಳು ಧಾರ್ಮಿಕ ಉಡುಗೆಗಿಂತ ಸಮವಸ್ತ್ರದಲ್ಲಿ ಶಾಲೆಗೆ ಬರುವಂತೆ ನಾವು ಶಿಫಾರಸು ಮಾಡುತ್ತೇವೆ. ದೇಶದ ಎಲ್ಲಾ ಧರ್ಮದವರು ಶಾಲಾ ಸಮವಸ್ತ್ರವನ್ನು ಸ್ವೀಕರಿಸಬೇಕು. ಆದರೆ, ಇದು ನನ್ನ ವೈಯಕ್ತಿಕ ನಿರ್ಧಾರ ಮಾತ್ರ. ನ್ಯಾಯಾಲಯ ಬೇರೆ ತೀರ್ಪು ನೀಡಿದರೆ ನನ್ನ ನಿರ್ಧಾರ ಬದಲಾಗಬಹುದು. ಪ್ರತಿಯೊಬ್ಬರೂ ನ್ಯಾಯಾಲಯದ ತೀರ್ಪುಗಳನ್ನು ಗೌರವಿಸಬೇಕು ಎಂಬ ಮಾತನ್ನು ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟಿನಲ್ಲಿ ಹಿಜಾಬ್ ಮೇಲಿನ ವಿಚಾರಣೆ ನಡೆಯುತ್ತಿರುವಾಗಲೇ ದೇಶದ ಹಲವೆಡೆ ಹಿಜಾಬ್ ಮಾದರಿಯ ಘಟನೆಗಳು ನಡೆಯುತ್ತಿವೆ. ಇದರೊಂದಿಗೆ ವಿಪಕ್ಷಗಳು ಬಿಜೆಪಿಯನ್ನು ಕೆಣಕುತ್ತಿವೆ. ಆದರೆ ಕೋಲು ಮುರಿಬಾರ್ದು, ಹಾವು ಸಾಯಬಾರದು ಎನ್ನುವ ರೀತಿಯಲ್ಲಿ  ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.

Share Post