National

Earthquake-ಉತ್ತರಕಾಶಿಯಲ್ಲಿ ಲಘು ಭೂಕಂಪನ: ತಪ್ಪಿದ ಅನಾಹುತ

ಉತ್ತರಕಾಶಿ: Earthquake ಉತ್ತರಾಖಂಡದ ಉತ್ತರಕಾಶಿಯಲ್ಲಿ ಫೆ.12ರ ಶನಿವಾರ ಬೆಳಗಿನ ಜಾವ ಲಘು ಭೂಕಂಪ ಸಂಭವಿಸಿದೆ. ಲಘು ಭೂಕಂಪನವಾದ್ದರಿಂದ ಅಷ್ಟೇನೂ ಪರಿಣಾಮ ಬೀರಿಲ್ಲ. ಅಧಿಕೃತ ಮೂಲಗಳ ಪ್ರಕಾರ ಉತ್ತರಕಾಶಿಯಿಂದ ಪೂರ್ವಕ್ಕೆ 39 ಕಿಲೋಮೀಟರ್ ದೂರದಲ್ಲಿ ಬೆಳಗಿನ ಜಾವ 5:33 ಗಂಟೆಗೆ ಭೂಕಂಪದ ಕೇಂದ್ರಬಿಂದುವನ್ನು ಪತ್ತೆಮಾಡಲಾಗಿದೆ . ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿಲ್ಲ.

ಮುಂಜಾನೆ 5 ಗಂಟೆಗೆ ಚಳಿಯಿಂದಾಗಿ ಜನರೆಲ್ಲಾ ಮನೆಯಲ್ಲಿ ಬೆಚ್ಚಗೆ ಮಲಗಿದ್ದ ವೇಳೆ ಭೂಕಂಪ ಉಂಟಾಗಿದೆ.  ಒಂದು ವಾರದೊಳಗೆ ಉತ್ತರ ಕಾಶಿಯಲ್ಲಿ ಭೂಕಂಪವಾಗಿರುವುದು ಇದು ಮೂರನೇ ಬಾರಿ ಎಂದು ಹೇಳಲಾಗಿದೆ. ಕಳೆದ ಭಾನುವಾರ ಬೆಳಗ್ಗೆ 11:27 ಗಂಟೆಗೆ, ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಫೆಬ್ರವರಿ 5 ರಂದು ಈ ಪ್ರದೇಶದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ.

ಫೆಬ್ರವರಿ 10 ರಂದು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೆಹಲಿ ಎನ್‌ಸಿಆರ್ ಮತ್ತು ಉತ್ತರಾಖಂಡದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ. ಕಳೆದ ವರ್ಷ ಉತ್ತರಾಖಂಡದ ಪಿಥೋರಗಢ ಮತ್ತು ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಭೂಕಂಪ ಸಂಭವಿಸಿತ್ತು. ಈ ವರ್ಷ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಭೂಕುಸಿತಗಳು ಸಂಭವಿಸಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್‌ನಲ್ಲಿ ಶಿಮ್ಲಾದಲ್ಲಿಯೂ ಭೂಕುಸಿತ ಸಂಭವಿಸಿತ್ತು.

Share Post