Politics

ರಮೇಶ್‌ ಜಾರಕಿಹೊಳಿ-ಫಡ್ನವಿಸ್‌ ಭೇಟಿ; ಕುತೂಹಲ ಕೆರಳಿಸಿದ ಚರ್ಚೆ

ಪಣಜಿ: ರಾಜ್ಯದಲ್ಲಿ ಸಚಿವಗಿರಿಗಾಗಿ ಲಾಬಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬೆಳಗಾವಿ ಸಾಹುಕಾರ್‌ ರಮೇಶ್‌ ಜಾರಕಿಹೊಳಿ ಅಲರ್ಟ್‌ ಆಗಿದ್ದಾರೆ. ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಚಿವ ಸ್ಥಾನ ತೊರೆದಿದ್ದ ರಮೇಶ್‌ ಜಾರಕಿಹೊಳಿ, ಇದೀಗ ಮತ್ತೆ ಸಂಪುಟ ಸೇರಲು ಸರ್ಕಸ್‌ ನಡೆಸಿದ್ದಾರೆ. ಇದಕ್ಕಾಗಿಯೇ ಅವರು, ಗೋವಾದ ಪಣಜಿಯಲ್ಲಿ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪಣಜಿಯ ಖಾಸಗಿ ಹೋಟೆಲ್‌ ಒಂದರಲ್ಲಿ ಫಡ್ನವಿಸ್‌ ಅವರನ್ನು ಭೇಟಿ ಮಾಡಿರುವ  ರಮೇಶ್‌ ಜಾರಕಿಹೊಳಿ, ಹಲವು ನಿಮಿಷಗಳ ಕಾಲ ಮಾತುಕತೆ ಆಡಿದ್ದಾರೆ. ಗೋವಾ ಚುನಾವಣೆ ಪ್ರಚಾರದಲ್ಲಿ ಫಡ್ನವಿಸ್‌ ಬ್ಯುಸಿಯಾಗಿದ್ದರೂ, ರಮೇಶ್‌ ಜಾರಕಿಹೊಳಿ ಭೇಟಿಗೆ ಅವಕಾಶ ನೀಡಿದ್ದಾರೆ. ರಮೇಶ್‌ ಜಾರಕಿಹೊಳಿಯವರು ಫಡ್ನವಿಸ್‌ ಮೂಲಕ ಹೈಕಮಾಂಡ್‌ ಮೇಲೆ ಒತ್ತಡ ಹಾಕುತ್ತಿದ್ದಾರೆಂದು ಹೇಳಲಾಗುತ್ತಿದೆ.

ಅಂದಹಾಗೆ, ರಮೇಶ್‌ ಜಾರಕಿಹೊಳಿ ಆಗಾಗ ಫಡ್ನಿವಿಸ್‌ ಅವರನ್ನು ಭೇಟಿಯಾಗುತ್ತಿರುತ್ತಾರೆ. ರಾಜಕೀಯ ತಿಕ್ಕಾಟಗಳು ಶುರುವಾದಾಗ, ಹೈಕಮಾಂಡ್‌ಗೆ ಏನಾದರೂ ಸುದ್ದಿ ಮಟ್ಟುಸಬೇಕಾದರೆ ಅವರು ಮೊದಲು ಫಡ್ನವಿಸ್‌ ಅವರನ್ನು ಭೇಟಿಯಾಗುತ್ತಾರೆ. ಹೀಗಾಗಿ ಈ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

 

Share Post