National

ಸಂಸತ್‌ ಜಂಟಿ ಅಧಿವೇಶನ ಆರಂಭ; ರಾಷ್ಟ್ರಪತಿ ಕೋವಿಂದ್‌ ಭಾಷಣ

ನವದೆಹಲಿ: ಇಂದಿನಿಂದ ಕೇಂದ್ರ ಬಜೆಟ್‌ ಅಧಿವೇಶನ ಶುರುವಾಗಿದೆ. ಮೊದಲ ದಿನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಆರಂಭಿಸಿದ್ದಾರೆ. ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಜಂಟಿ ಅಧಿವೇಶನ ನಡೆಯುತ್ತಿದೆ.

ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು, ದೇಶದಲ್ಲಿ ಲಸಿಕಾ ಅಭಿಯಾನ ಯಶಸ್ವಿಯಾಗಿದೆ. ದೇಶದ ಜನರು ಸ್ವಯಂ ಪ್ರೇರಿತರಾಗಿ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ದೇಶದ ಜನರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಲಸಿಕೆ ಅಭಿಯಾನ ಶುರು ಮಾಡಿ ಒಂದು ವರ್ಷವೂ ಆಗಿಲ್ಲ. ಇಷ್ಟು ಕಡಿಮೆ ಅವಧಿಯಲ್ಲಿ ದೇಶದ ಶೇ. 75 ರಷ್ಟು ಮಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಈಗಾಗಲೇ 150 ಕೋಟಿ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಸರ್ಕಾರದ ಈ ಕ್ರಮಗಳಿಂದ ಜನರಿಗೆ ಸೂಕ್ತ ಆರೋಗ್ಯ ಸೌಲಭ್ಯ ಸಿಗುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಖುಷಿ ವ್ಯಕ್ತಪಡಿಸಿದರು.

ರಾಷ್ಟ್ರಪತಿ ಭಾಷಣದ ಮುಖ್ಯಾಂಶಗಳು

=========================

೧. ಕೇಂದ್ರ ಸರ್ಕಾರದ ಯೋಜನೆಗಳಿಂದ ರೈತರು, ಬಡವರಿಗೆ ಅನುಕೂಲವಾಗಿವೆ
೨. ಗರೀಬ್‌ ಕಲ್ಯಾಣ್‌ ಯೋಜನೆಯಡಿ ಬಡವರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ
೩. ದೇಶದಲ್ಲಿ ಬಡವರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ
೪. ಸ್ವಾನಿಧಿ ಯೋಜನೆ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಯೋಜನೆ
೫. ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ
೬. ಪಿಎಂ ಆವಾಸ್‌ ಯೋಜನೆಯಡಿ 2 ಕೋಟಿ ಮನೆ ವಿತರಿಸಲಾಗುತ್ತಿದೆ
೭. ಗ್ರಾಮೀಣ ಭಾಗದ ಆರು ಕೋಟಿ ಮನೆಗಳಿಗೆ ನೀರು ಪೂರೈಕೆ

೮. ಕೃಷಿ ಉತ್ಪನ್ನಗಳು ದಾಖಲೆ ಪ್ರಮಾಣದಲ್ಲಿ ರಫ್ತಾಗುತ್ತಿವೆ

೯. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಏಳು ಪದಕ ಬಂದಿದೆ
೧೦. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರು 17 ಪದಕ ಗೆದ್ದಿದ್ದಾರೆ

೧೧. ಎಂಎಸ್‌ಎಂಇ ನಮ್ಮ ಆರ್ಥಿಕತೆ ಬೆನ್ನೆಲುಬಾಗಿದೆ

 

Share Post