ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕು; ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು: ಜಾತಿ ಬಲ, ಹಣ ಬಲ, ತೋಳ್ಬಲಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿತಗೊಳ್ಳುತ್ತಿದೆ. ಇದನ್ನು ತಡೆಯಲು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳು ಅಗತ್ಯವಾಗಿವೆ ಎಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ಎಲ್ಲೆಡೆ ವ್ಯಾಪಕ ಸಮಾಲೋಚನಾ ಸಭೆ ಮತ್ತು ಚರ್ಚೆಗಳು ಪ್ರಾರಂಭವಾಗಲಿ ಎಂದು ಆಶಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನೈತಿಕ ಅಧಃಪತನ ಕುರಿತು ಕೇವಲ ರಾಜಕಾರಣಿಗಳ ವಿರುದ್ಧ ಬೊಟ್ಟು ಮಾಡುವ ಸಂಸ್ಕøತಿ ದೂರವಾಗಬೇಕು. ರಾಜಕೀಯದ ವಿವಿಧ ಮಜಲುಗಳಲ್ಲಿ ಅಧಿಕಾರವನ್ನು ಅನುಭವಿಸಿ ಉತ್ತುಂಗದಲ್ಲಿರುವ ಸಮಾಜದ ಹಿರಿಯರು ಮೌನ ಮುರಿಯಬೇಕು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮಾತ್ರವಲ್ಲದೇ, ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರೂ ಕೂಡಾ ನೈತಿಕ ಹೊಣೆಗಾರರಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮಾರ್ಗದರ್ಶನ ಹಾಗೂ ಸಲಹೆಗಳನ್ನು ದೊರಕಿಸಿಕೊಡಲು ಮುಂದಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಚುನಾವಣಾ ಪ್ರಕ್ರಿಯೆಗಳಲ್ಲಿನ ಲೋಪದೋಷಗಳು ಅರಾಜಕತೆಗೆ ಕಾರಣವಾಗುತ್ತವೆ. ಇದರ ವಿರುದ್ಧ ಜನಾಭಿಪ್ರಾಯ ರೂಪಿಸುವುದು ಹಾಗೂ ಪಾಲ್ಗೊಳ್ಳುವುದು ಯುವಜನರ ಕರ್ತವ್ಯ ಮತ್ತು ಜವಾಬ್ದಾರಿ. ಇಂದಿನ ಯುವ ಪೀಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರಾಗದಿದ್ದಲ್ಲಿ ಇಡೀ ವ್ಯವಸ್ಥೆಯೇ ಕುಸಿತಕ್ಕೆ ಒಳಗಾಗುವ ಎಲ್ಲಾ ಲಕ್ಷಣಗಳು ಇವೆ ಎಂದು ಸ್ಪೀಕರ್ ಆತಂಕ ವ್ಯಕ್ತಪಡಿಸಿದರು.