ನಾನಿನ್ನೂ ಜೆಡಿಎಸ್ ಬಿಡುವ ತೀರ್ಮಾನ ಮಾಡಿಲ್ಲ; ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್
ತುಮಕೂರು: ನಾನು ಜೆಡಿಎಸ್ ಪಕ್ಷ ತೊರೆಯುವ ತೀರ್ಮಾನ ಇನ್ನೂ ಮಾಡಿಲ್ಲ. ಇನ್ನೂ ಕೆಲ ದಿನ ಜೆಡಿಎಸ್‌ನಲ್ಲೇ ಇರುತ್ತೇನೆ, ಮುಂದಿನ ಬೆಳವಣಿಗೆಳನ್ನು ಕಾದುನೋಡುತ್ತೇನೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ನಾನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ. ಆದರೂ ಕುಮಾರಸ್ವಾಮಿಯವರು, ನನ್ನ ಕ್ಷೇತ್ರಕ್ಕೆ ಬಂದು ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದರು. ಹೀಗಾಗಿ ನನಗೆ ಬೇಸರವಾಯಿತು ಎಂದು ಹೇಳಿದ್ದಾರೆ.
ನಾನು ಎಲ್ಲೂ ಕೂಡಾ ಕಾಂಗ್ರೆಸ್ ಸೇರುತ್ತೇನೆಂದು ಹೇಳಿಲ್ಲ. ಆದ್ರೆ ಯಾರೇ ಆಗಲಿ, ಅವರಿಗೆ ಎಲ್ಲಿ ಅನುಕೂಲವಾಗುತ್ತದೋ ಅಲ್ಲಿರುತ್ತಾರೆ. ಹೆಚ್.ಡಿ.ಕುಮಾರಸ್ವಾಮಿಯವರು ಸರಿಯಾಗಿ ನಡೆಸಿಕೊಂಡಿದ್ದರೆ ಯಾರೂ ಕೂಡಾ ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ. ಅವರು ಬೇರೆಯವರ ಮೇಲೆ ಕೆಂಡಾಮಂಡಲವಾಗುವ ಬದಲು, ಅವರ ಲೋಪವನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಇನ್ನೂ ಕೆಲ ದಿನ ಜೆಡಿಎಸ್‌ನಲ್ಲೇ ಇದ್ದು ಕಾದುನೋಡುತ್ತೇವೆ. ಎಲ್ಲವೂ ಸರಿಯಾದರೆ ನಾನು ಯಾಕೆ ಪಕ್ಷ ಬಿಡಲು ಎಂದು ಶಾಸಕ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.