ಬಾಲಕಿ ಕಿಡ್ನ್ಯಾಪ್, ಮೂರು ದಿನಗಳಿಂದ ಚಿತ್ರಹಿಂಸೆ ನೀಡಿದ ಕಿರಾತಕ
ಆಂಧ್ರಪ್ರದೇಶ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರಗಳು ಎಷ್ಟೇ ಕಠಿಣ ಕಾನೂನು ಜಾರಿಗೆ ತಂದರೂ ದೌರ್ಜನ್ಯ ನಿಂತಿಲ್ಲ. ಮೃಗಗಳಂತೆ ವರ್ತಿಸುವವರ ವಿರುದ್ಧ ಪೊಲೀಸರು ಎಷ್ಟೇ ಕಠೋರವಾಗಿ ವರ್ತಿಸಿದರೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಕೃಷ್ಣಾಜಿಲ್ಲಾ ಗನ್ನವರಂನಲ್ಲಿ 14 ವರ್ಷದ ಬಾಲಕಿಯನ್ನು ಯುವಕನೊಬ್ಬ ಅಪಹರಿಸಿ ಮೂರು ದಿನಗಳ ಚಿತ್ರಹಿಂಸೆ ನೀಡಿದ ದಾರುಣ ಘಟನೆ ಬೆಳಕಿಗೆ ಬಂದಿದೆ.
ಗನ್ನವರಂ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಹದಿನಾಲ್ಕು ವರ್ಷದ ಬಾಲಕಿಯನ್ನು ಯುವಕನೊಬ್ಬ ಭಾನುವಾರ ಸಂಜೆ ಅಪಹರಿಸಿದ್ದಾನೆ. ಬಾಲಕಿ ನಾಪತ್ತೆಯಾದ ನಂತರ ಎಲ್ಲೂರು, ಕಾಕಿನಾಡ ಮತ್ತು ರಾಜಮಂಡ್ರಿಯಲ್ಲಿ ಪೋಷಕರು ಮತ್ತು ಸಂಬಂಧಿಕರು ಹುಡುಕಾಡಿದ್ದಾರೆ. ಬಂಧುಗಳು, ಸ್ನೇಹಿತರ ಮನೆಯಲ್ಲಾ ಹುಡುಕಾಡಿದ್ದಾರೆ. ಬಾಲಕಿಯ ಸುಳಿವು ಸಿಗದ ಕಾರಣ ಬಾಲಕಿಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಹರಣಕ್ಕೊಳಗಾಗಿದ್ದ ಯುವತಿಯನ್ನು ಕಿರಾತಕ ಗನ್ನವರಂ ಪೊಲೀಸ್ ಠಾಣೆ ಹತ್ತಿರದಲ್ಲೇ ಇರುವ ಕೊಠಡಿಯಲ್ಲಿ ಬಂಧಿಸಿದ್ದಾನೆ. ಯುವಕನ ಬಗ್ಗೆ ಮಾಹಿತಿ ಪಡೆದ ಗನ್ನವರಂ ಪೊಲೀಸರು ಕಾರ್ಯಾಚರಣೆ ನಡೆಸಿ ಕೊಠಡಿಯಲ್ಲಿ ಬಂಧಿತಳಾಗಿದ್ದ ಬಾಲಕಿಯನ್ನು ರಕ್ಷಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.