ಗಡಿಯಲ್ಲಿ 2500 ಕೆಜಿಯಷ್ಟು ಸ್ಫೋಟಕ ವಶ; ಅತಿದೊಡ್ಡ ಕಾರ್ಯಾಚರಣೆ
ಮಿಜೋರಾಂ: ಮಿಜೋರಾಂನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂಡೋ ಮ್ಯಾನ್ಮಾರ್ ಗಡಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಾಗಿಸುತ್ತಿದ್ದರ ಬಗ್ಗೆ ಮಾಹಿತಿ ಅರಿತ ಅಸ್ಸಾಂ ರೈಫಲ್ಸ್ ಪಡೆ, ಯಶಸ್ವಿ ಕಾರ್ಯಾಚರಣೆ ನಡೆಸಿದೆ. ದಾಳಿ ವೇಳೆ ಬರೋಬ್ಬರಿ 2500 ಕೆಜಿಯಷ್ಟು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಷ್ಟ್ರ ವಿರೋದಿ ಚಟುವಟಿಕೆಗಳಿಗಾಗಿ ಈ ಸ್ಫೋಟಕಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಮಿನಿ ಟ್ರಕ್ ಒಂದರಲ್ಲಿ ಈ ಸ್ಫೋಟಕಗಳನ್ನು ಸಾಗಿಸುತ್ತಿದ್ದಾಗ ಸೈಹಾ ಜಿಲ್ಲೆಯ ಗಡಿ ಗ್ರಾಮವಾದ ಜವ್ಗ್ಲಿಂಗ್ ಬಳಿ ದಾಳಿ ನಡೆಸಲಾಯಿತು.
ಅಸ್ಸಾಂ ರೈಫಲ್ಸ್ ಪಡೆ ತುಪಾಂಗ್ ಮತ್ತು ಜಾಂಗ್ಲಿಂಗ್ ಬಳಿ ಚೆಕ್ಪೋಸ್ಟ್ ಸ್ಥಾಪನೆ ಮಾಡಿತ್ತು. ಇಲ್ಲಿ ತಪಾಸಣೆ ವೇಳೆ ಸ್ಫೋಟಕ ತುಂಬಿದ್ದ ಟ್ರಕ್ ಪತ್ತೆಯಾಗಿದೆ. ಟ್ರಕ್ನಲ್ಲಿ 2500 ಕೆಜಿಯಷ್ಟು ಬೃಹತ್ ಪ್ರಮಾಣದ ಸ್ಫೋಟಕಗಳು, 4500 ಮೀಟರ್ನಷ್ಟು ಡೆಟೋನೇಟರ್ಗಳು ಪತ್ತೆಯಾಗಿದೆ.