Bengaluru

ಜೀವನ ನಡೆಯಬೇಕು, ಜೀವವೂ ಉಳಿಯಬೇಕು: ಕುಮಾರಸ್ವಾಮಿ

ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಕೇಸ್‌ಗಳ  ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಕಿವಿ ಮಾತನ್ನು ಹೇಳಿದ್ದಾರೆ.  ನಿನ್ನೆ ಒಂದೇ ದಿನ 41 ಸಾವಿರ ಕೇಸ್ ದಾಖಲಾಗಿದೆ. ಇದು ಸರ್ಕಾರ ಮತ್ತು ನಾಡಿನ ಜನತೆಗೆ ಎಚ್ಚರಿಕೆಯ ಗಂಟೆಯಾಗಿದೆ. ಸರ್ಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಚಾರದ ಬಗ್ಗೆ ಸರ್ಕಾರ ನಡೆಸುವ ಪಕ್ಷದಲ್ಲೇ  ಸಹಮತ ಇಲ್ಲ. ಅವರೇ ಗೊಂದಲದಲ್ಲಿ ಇದ್ದರೆ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಹಸಿವಿನಿಂದ ಯಾರೂ ಸತ್ತಿಲ್ಲ ಎಂದು ನ್ಯಾಯಾಲಯದ  ಮುಂದೆ ನಿನ್ನೆ ಕೇಂದ್ರ ಸರ್ಕಾರ ಹೇಳಿದೆ. ಎರಡು ಹೊತ್ತಿನ ಊಟ ಇಲ್ಲದೆ ಸಾಯುವವರು ಇದ್ದಾರೆ. ಜನ ಎಷ್ಟು ಕಷ್ಟದಲ್ಲಿ ಇದ್ದಾರೆ ಎನ್ನುವುದನ್ನು ಸರಕಾರ ನೋಡಬೇಕು. ಸೋಂಕಿನ ಕಾರಣದಿಂದ ಜನ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನಿಜ ಸ್ಥಿತಿ ಹೀಗಿರುವಾಗ  ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡ್ತಿದೆ ಎಂದು ಕಿಡಿಕಾರಿದ್ರು.

ಜನರಿಗೆ ಸಂಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವುದು ಎಲ್ಲ ಸರ್ಕಾರಗಳ ಜವಾಬ್ದಾರಿ. ಸಣ್ಣ ರೈತರಿಗೆ ಮಾರಾಟ ವ್ಯವಸ್ಥೆ, ಬೀದಿಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಬೇಕು.  ಜನರ ಕಷ್ಟಕ್ಕೆ ಮಿಡಿಯದಿದ್ದರೆ ಸರ್ಕಾರ ಇರುವುದು ಯಾಕೆ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಒಂದು ಕಡೆ ಸೋಂಕನ್ನು ನಿಯಂತ್ರಣ ಮಾಡಬೇಕು ಹಾಗೂ ಅದರ ಜತೆ ಜತೆಯಲ್ಲೇ ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಬೇಕು. ಜೀವ ಉಳಿಯಬೇಕು, ಜೀವನವೂ ನಡೆಯಬೇಕು.  ಸಣ್ಣಸಣ್ಣ ಕೆಲಸ ಮಾಡಿ ಜನರು ಜೀವನ ಮಾಡುತ್ತಿದ್ದಾರೆ. ಅವರಿಗೆ ತೊಂದರೆ ಆಗುತ್ತದೆ ಎಂಬುದನ್ನು ಸರಕಾರ ಗಮನಿಸಬೇಕು. ತಜ್ಞರ ವರದಿ ಹಾಗು ಪರ ವಿರೋಧಗಳ ಮಾಹಿತಿ  ತಿಳಿದುಕೊಂಡು ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ರು.

Share Post