NationalPolitics

ರಾಜ್ಯದ 28 ಸಚಿವರ ಜೊತೆ ರಾಹುಲ್‌ ಗಾಂಧಿ ಮೀಟಿಂಗ್‌; ಚರ್ಚೆಗೆ ಬರುತ್ತಾ ಡಿಸಿಎಂಗಳ ನೇಮಕ ವಿಚಾರ..?

ಬೆಂಗಳೂರು; ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ಗಳಿಸಿ ಅಧಿಕಾರ ಹಿಡಿದಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲೋದಕ್ಕೆ ಕಾಂಗ್ರೆಸ್‌ ಮಾಡುತ್ತಿದೆ. ಅದಕ್ಕಾಗಿ, ಮೀಟಿಂಗ್‌ ಮೇಲೆ ಮೀಟಿಂಗ್‌ ನಡೆಸಲಾಗುತ್ತಿದೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಇದೀಗ ಕ್ಷೇತ್ರವಾರು ಜವಾಬ್ದಾರಿ ಹೊತ್ತುಕೊಂಡಿರುವ 28 ಸಚಿವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ. ರಾಹುಲ್‌ ಗಾಂಧಿಯವರು ಈ ಎಲ್ಲಾ 28 ಸಚಿವರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಸಿಎಂ ಹಾಗೂ ಡಿಸಿಎಂ ಹೊರತುಪಡಿಸಿ, ಲೋಕಸಭಾ ಕ್ಷೇತ್ರವಾರು ಜವಾಬ್ದಾರಿ ವಹಿಸಿಕೊಂಡಿರುವ 28 ಸಚಿವರೂ ಈಗ ದೆಹಲಿಯಲ್ಲಿದ್ದಾರೆ. ಸಚಿವರಾದ ಡಾ.ಜಿ.ಪರಮೇಶ್ವರ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್ ಸೇರಿದಂತೆ 28 ಸಚಿವರು ರಾಹುಲ್‌ ಗಾಂಧಿ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಚುನಾವಣೆ ರಣತಂತ್ರ, ಸಚಿವರ ನಡುವೆ ಸಮನ್ವರ ಸಾಧಿಸುವ ವಿಚಾರವಾಗಿ ಚರ್ಚೆ ನಡೆಸಲಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ವಿಚಾರವಾಗಿ ಪ್ರಮುಖವಾಗಿ ಇಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನು ಇದೇ ವೇಳೆ ಹೆಚ್ಚುವರಿ ಡಿಸಿಎಂಗಳ ನೇಮಕ ಮಾಡಿದರೆ ಚುನಾವಣೆಯಲ್ಲಿ ಹೇಗೆಲ್ಲಾ ಲಾಭವಾಗುತ್ತದೆ ಎಂಬ ವಿಚಾರವನ್ನು ಸಚಿವರು ರಾಹುಲ್‌ ಗಾಂಧಿ ಮುಂದಿಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಸಚಿವರಾದ ಕೆಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಸಮುದಾಯವಾರು ಡಿಸಿಎಂಗಳ ನೇಮಕದಿಂದಾಗಿ ಆಗುವ ಲಾಭದ ಬಗ್ಗೆ ರಾಹುಲ್‌ ಗಾಂಧಿಗೆ ವಿವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Share Post