BengaluruPolitics

ಕೊಪ್ಪಳದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ..?; ಗುಪ್ತ ಸಮೀಕ್ಷೆ ನಡೆಸಿದ್ದೇಕೆ ಎಐಸಿಸಿ..?

ಬೆಂಗಳೂರು; ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್‌ ನಾಯಕರು, ಕರ್ನಾಟಕ ಹಾಗೂ ತೆಲಂಗಾಣದ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಇಲ್ಲಿ ಹೆಚ್ಚು ಸ್ಥಾನ ಗೆಲ್ಲೋದಕ್ಕೆ ಪ್ಲ್ಯಾನ್‌ ನಡೀತಿದೆ. ಇನ್ನೊಂದೆಡೆ ಹೈಕಮಾಂಡ್‌ ನಾಯಕರು ತೆಲಂಗಾಣ ಅಥವಾ ಕರ್ನಾಟಕದಲ್ಲೇ ಸ್ಪರ್ಧೆ ಮಾಡೋದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಮಾಹಿತಿ ಪ್ರಕಾರ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರಂತೆ. ಅದಕ್ಕಾಗಿ ಎಐಸಿಸಿ ನಾಯಕರು ರಾಜ್ಯದ ನಾಯಕರಿಗೂ ಗೊತ್ತಾಗದಂತೆ ಕೊಪ್ಪಳ ಕ್ಷೇತ್ರದಲ್ಲಿ ಸರ್ವೇ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದಲ್ಲದೆ ತೆಲಂಗಾಣದ ಒಂದು ಕ್ಷೇತ್ರದಲ್ಲೂ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟದಲ್ಲಿ ಐದು ಗ್ಯಾರೆಂಟಿಗಳು ಜಾರಿ ಮಾಡಿರುವುದರಿಂದ ಕೊಂಚ ಅನುಕೂಲದ ವಾತಾವರಣ ಇದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರ ಮಾಡಿದೆ. ಜಾತಿ ಲೆಕ್ಕಾಚಾರ, ಸಾಮಾಜಿಕ ಸ್ಥಿತಿಗತಿಯ ಆಧಾರದ ಮೇಲೆ ಕೊಪ್ಪಳದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಿದರೆ ಅನುಕೂಲವಾಗುವುದೇ ಎಂಬುದರ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಸ್ಪರ್ಧೆ ಮಾಡಿದರೆ ಅನುಕೂಲ ಎಂಬ ವರದಿ ಬಂದಿದೆ ಎಂದು ಹೇಳಲಾಗುತ್ತಿದೆ.

ಗಾಂಧಿ ಕುಟುಂಬದಿಂದ ಈ ಹಿಂದೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಇಂದಿರಾಗಾಂಧಿ ಸ್ಪರ್ಧೆ ಮಾಡಿದ್ದರು. ಅನಂತರ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾ ಗಾಂಧಿ ಕಣಕ್ಕಿಳಿದು ಗೆದ್ದಿದ್ದರು. ಇದೀಗ ಪ್ರಿಯಾಂಕಾ ಗಾಂಧಿ ರಾಜ್ಯದಿಂದ ಕಣಕ್ಕಿಳಿಯೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಿಂದ ಗಾಂಧಿ ಕುಟುಂಬದವರು ಕಣಕ್ಕಿಳಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತದೆ.

ಕೊಪ್ಪಳ ಲೋಕಸಭಾ ಕ್ಷೇತ್ರವೇ ಯಾಕೆ..?

8 ವಿಧಾನಸಭಾ ಕ್ಷೇತ್ರವನ್ನೊಳಗೊಂಡ ಕೊಪ್ಪಳ ಕ್ಷೇತ್ರ

ರಾಯಚೂರು ಜಿಲ್ಲೆಯ 2, ಬಳ್ಳಾರಿ ಜಿಲ್ಲೆಯ 1 ಸೇರಿ 8 ವಿಧಾನಸಭಾ ಕ್ಷೇತ್ರ

ಈ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 6 ಕ್ಷೇತ್ರದಲ್ಲಿ ಗೆದ್ದಿದೆ. ಬಿಜೆಪಿ 1, ಜನಾರ್ದನರೆಡ್ಡಿ ಪಕ್ಷ 1ರಲ್ಲಿ ಗೆದ್ದಿದೆ

ಈ ಕಾರಣದಿಂದ ಈ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಪ್ರಿಯಾಂಕಾ ಗಾಂಧಿ ಕೊಪ್ಪಳದಿಂದ ಅಥವಾ ತೆಲಂಗಾಣದ ಒಂದು ಕ್ಷೇತ್ರದಿಂದ ಸ್ಪರ್ಧೆಗೆ ಒಲವು ತೋರಿಸಿದ್ದಾರೆ ಎಂದು ತಿಳಿದುಬಂದಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳದಲ್ಲಿ ಬಿಜೆಪಿಯ ಕರಡಿ ಸಂಗಣ್ಣ 38,397 ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯ ಕರಡಿ ಸಂಗಣ್ಣ 5,86,783 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ರಾಜಶೇಖರ ಬಸವರಾಜ ಹಿಟ್ನಾಲ್‌ 5,48,386 ಮತಗಳನ್ನು ಪಡೆದಿದ್ದರು. ಆದ್ರೆ ಈ ಬಾರಿ ಕಾಂಗ್ರೆಸ್‌ಗೆ ಇಲ್ಲಿ ಉತ್ತಮ ವಾತಾವರಣ ಇದೆ ಎಂದು ವರದಿ ಹೇಳಿದೆ ಎಂದು ಹೇಳಲಾಗುತ್ತಿದೆ.

Share Post