Politics

ರಜೆ ನೀಡಿ, ಮತ ಹಾಕಲು ಪ್ರೋತ್ಸಾಹಿಸಿ; ತುಷಾರ್ ಗಿರಿನಾಥ್

ಬೆಂಗಳೂರು; ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತದಾನದ ದಿನ ರಜೆ ನೀಡಿ ಎಲ್ಲರಿಂದಲೂ ಕಡ್ಡಾಯ ಮತದಾನ ಮಾಡಿಸಲು ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರು ತಿಳಿಸಿದರು.

ಐಟಿ-ಬಿಟಿ ಇಲಾಖೆ ಸಹಯೋಗದಲ್ಲಿ ಎಂ.ಎಸ್ ಬಿಲ್ಡಿಂಗ್(5ನೇ ಗೇಟ್) 6ನೇ ಮಹಡಿಯ ಸಮ್ಮೇಳನಾ ಸಭಾಂಗಣದಲ್ಲಿ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರ ಜೊತೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಎಲ್ಲಾ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಆ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಾಗಿದ್ದು, ಅದಕ್ಕೆ ಎಲ್ಲಾ ಸಂಸ್ಥೆಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಆಯಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತಪ್ಪದೆ ಮತ ಚಲಾಯಿಸಲು ಅರಿವು ಮೂಡಿಸುವ ಕೆಲಸ ಮಾಡಲು ತಿಳಿಸಲಾಗಿದೆ ಎಂದರು.

ಬೆಂಗಳೂರು ನಗರದಲ್ಲಿ ಐಟಿ-ಬಿಟಿ ಹಬ್ ಇದ್ದು, ಲಕ್ಷಾಂತರ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಲ್ಲಿ ಹೆಚ್ಚು ಐಟಿ-ಬಿಟಿ ಸಂಸ್ಥೆಗಳಿರುವ ಕಡೆ ಹಾಗೂ ಕಡಿಮೆ ಮತದಾನವಾಗಿರುವ ಸಂಸ್ಥೆಗಳಲ್ಲಿ ಹೆಚ್ಚಾಗಿ ಮತದಾನದ ಕುರಿತು ಜಾಗೃತಿ ಮೂಡಿಸಲು ತಿಳಿಸಲಾಗಿದೆ ಎಂದರು.

ಐಟಿ-ಬಿಟಿ ಸಂಸ್ಥೆಗಳಲ್ಲಿ ಹೆಚ್.ಆರ್.ಎಂ.ಎಸ್ ವ್ಯವಸ್ಥೆಯಿದ್ದು, ಆ ಮೂಲಕ ಸಿಬ್ಬಂದಿಗಳಿಗೆ ತಪ್ಪದೆ ಮತದಾನ ಮಾಡಲು ಸಂದೇಶ ಕಳುಹಿಸುವ, ಎಲ್ಲಾ ಭಾಷೆಯನ್ನೊಳಗೊಂಡ “ಮೈ ಭಾರತ್ ಹೂ” ಚುನಾವಣಾ ಗೀತೆ ಹಾಗೂ ಇನ್ನಿತರೆ ಜಾಗೃತಿ ಸಂದೇಶಗಳ ದೃಶ್ಯಾವಳಿಗಳನ್ನು ಎಲ್ಲಾ ಸಂಸ್ಥೆಗಳ ಎಲ್‌ಇಡಿ ಪರದೆಗಳಲ್ಲಿ ಹಾಕಲು ಸೂಚಿಸಲಾಗಿದೆ ಎಂದು ಹೇಳಿದರು.

ಸಾಕಷ್ಟು ಸಿಬ್ಬಂದಿಗಳು ಐಟಿ-ಬಿಟಿ ಸಂಸ್ಥೆಗಳಲ್ಲಿ ಬೇರೆ ರಾಜ್ಯಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿ ಮತದಾನದ ಹಕ್ಕನ್ನು ಹೊಂದಿರುವುದಿಲ್ಲ. ಇನ್ನು ಕೆಲವರು ಮನೆಯಿಂದ ಕೆಲಸ ಮಾಡುತ್ತಿರುವ ಕಾರಣ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಅದಲ್ಲದೆ ಮತಗಟ್ಟೆಗಳಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂಬ ಮನೋಭಾವಿರುತ್ತದೆ. ಈ ಪೈಕಿ ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಇರುವುದಾಗಿ ಮಾಹಿತಿ ನೀಡಲಾಗಿದ್ದು, ಈ ಬಾರಿ ಐಟಿ-ಬಿಟಿ ಸಂಸ್ಥೆಗಳಲ್ಲಿ ಹೆಚ್ಚು ಮತದಾನವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿಯಾದ ಶ್ರೀಮತಿ ಏಕ್ ರೂಪ್ ಕೌರ್ ರವರು ಮಾತನಾಡಿ, ಲೋಕಸಭಾ ಚುನಾವಾಣೆ ಹಿನ್ನೆಲೆ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಮತದಾನದ ಕುರಿತು ತಿಳುವಳಿಕೆಯನ್ನು ನೀಡಲಾಗಿದೆ ಎಂದರು.

ನಗರದಲ್ಲಿ ಸುಮಾರು 4,500 ಐಟಿ-ಬಿಟಿ ಸಂಸ್ಥೆಗಳಿದ್ದು, ಎಲ್ಲಾ ಸಂಸ್ಥೆಗಳಿಗೂ ಮತದಾನದ ದಿನವಾದ ಏಪ್ರಿಲ್ 26ರಂದು ರಜೆ ನೀಡಿ ಎಲ್ಲಾ ಮತದಾರರಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಲು ಮನವಿ ಮಾಡಲಾಗಿದೆ. ಜೊತೆಗೆ ಎಲ್ಲಾ ಸಿಬ್ಬಂದಿಗಳಿಗೆ ಮೇಲ್ ಮೂಲಕವೂ ಮತದಾನ ಮಾಡಲು ಅರಿವು ಮೂಡಿಸಲು ತಿಳಿಸಲಾಗಿದೆ ಎಂದು ಹೇಳಿದರು.

ಸಿಬ್ಬಂದಿಗಳಿಗೆ ವೇತನ ಸಹಿತ ರಜೆ ನೀಡಲು ಅಧಿಸೂಚನೆ

ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ 1951 ಕಲಂ 135ಬಿ ಅಡಿಯಲ್ಲಿ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲು ಸರ್ಕಾರವು ದಿನಾಂಕ: 30-03-2024 ರಂದು ಅಧಿಸೂಚನೆ ಹೊರಡಿಸಿರುತ್ತದೆ. ಸದರಿ ಅಧಿಸೂಚನೆಯಂತೆ ಎಲ್ಲಾ ಐಟಿ-ಬಿಟಿ ಸಂಸ್ಥೆಗಳ ಸಿಬ್ಬಂದಿಗೆ ರಜೆ ನೀಡುವಂತೆ ಸೂಚಿಸಿದರು.

ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ವಿವಿಧ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಳು ಉಪಸ್ಥಿತರಿದ್ದರು.

Share Post