ನೂತನ ಜೆಡಿಎಸ್ ರಾಷ್ಟ್ರಾಧ್ಯಕ್ಷರನ್ನು ಘೋಷಿಸಿದ ಸಿ.ಎಂ.ಇಬ್ರಾಹಿಂ!
ನವದೆಹಲಿ; ನಮ್ಮದೇ ನಿಜವಾದ ಜೆಡಿಎಸ್ ಎಂದು ಹೇಳುತ್ತಿರುವ ಸಿ.ಎಂ.ಇಬ್ರಾಹಿಂ ಅವರು ನೂತನ ಜೆಡಿಎಸ್ ರಾಷ್ಟ್ರಾಧ್ಯಕ್ಷರನ್ನು ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ಕೆ.ಜೆ.ಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಈ ಮೂಲಕ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರಿಗೆ ಟಾಂಗ್ ನೀಡಲಾಗಿದೆ.
ಇತ್ತೀಚೆಗೆ ನಡೆದ ಜೆಡಿಎಸ್ ಸಭೆಯ ವೇಳೆ ಸಿ.ಎಂ.ಇಬ್ರಾಹಿಂ ಹಾಗೂ ಸಿ.ಕೆ.ನಾಣು ಅವರನ್ನು ಅಧಿಕೃತವಾಗಿ ಉಚ್ಛಾಟನೆ ಮಾಡಲಾಗಿತ್ತು. ಆದ್ರೆ, ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ನಮ್ಮದೇ ನಿಜವಾದ ಜೆಡಿಎಸ್ ಎಂದು ಹೇಳುತ್ತಾ ಬಂದಿದ್ದರು. ಶೀಘ್ರದಲ್ಲೇ ಜೆಡಿಎಸ್ ರಾಷ್ಟ್ರಾಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದರು. ಇದೀಗ ಅವರು ಉಚ್ಛಾಟಿತ ನಾಯಕರ ಸಭೆ ಕರೆದು, ಸಿ.ಕೆ.ನಾಣು ಅವರನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷರು ಎಂದು ಘೋಷಣೆ ಮಾಡಿದ್ದಾರೆ.
ಇನ್ನು ಸಭೆ ಬಳಿಕ ಮಾತನಾಡಿದ ಅವರು, ನಮ್ಮದೇ ನಿಜವಾದ ಜೆಡಿಎಸ್ ಪಕ್ಷ. ಜೆಡಿಎಸ್ ಪಕ್ಷದ ಚಿಹ್ನೆ ನಮಗೇ ಕೊಡಬೇಕು. ಕೇಂದ್ರ ಚುನಾವಣಾ ಆಯೋಗಕ್ಕೆ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ. ತಮಿಳುನಾಡು, ಕೇರಳ ಸೇರಿ ಹಲವು ರಾಜ್ಯಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.