ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಭೇಟಿ; 1 ಗಂಟೆಗೂ ಹೆಚ್ಚು ಚರ್ಚೆ
ಬೆಂಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿ ಪರಸ್ಪರ ಮಾತುಕತೆ ನಡೆಸಿದ್ದಾರೆ. ರೇಣುಕಾಚಾರ್ಯ ಕಚೇರಿಯಲ್ಲಿ ನಡೆದ ಮಾತುಕತೆಯಲ್ಲಿ ಉಭಯ ನಾಯಕರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚಗೆ ಕಾರಣವಾಗಿದೆ.
ಬೊಮ್ಮಾಯಿ ಸಂಪುಟದಲ್ಲಿ ಸೇರ್ಪಡೆಯಾಗುವುದಕ್ಕಾಗಿ ಹಾಗೂ ಸಂಪುಟ ವಿಸ್ತರಣೆ ಮಾಡುವಂತೆ ಒತ್ತಡ ಹೇರುವ ಸಲುವಾಗಿ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರೂ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಇನ್ನೊಂದೆಡೆ ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರ ಬೆಂಬಲಿಗರು. ಆದ್ರೆ ಯಡಿಯೂರಪ್ಪರನ್ನು ಸದಾ ವಿರೋಧಿಸುವ ಯತ್ನಾಳ್ ಜೊತೆ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಸಚಿವಾಕಾಂಕ್ಷಿಗಳೆಲ್ಲಾ ಸೇರಿಕೊಂಡು ಹಿರಿಯ ಸಚಿವರಿಗೆ ಕೊಕ್ ಕೊಟ್ಟು ನಮಗೆ ಅವಕಾಶ ಕೊಡಿ ಎಂದು ಕೇಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಇಬ್ಬರೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.