ಪ್ರಧಾನಿ ಮೋದಿ ಹುಟ್ಟುಹಬ್ಬ; ಶುಭ ಕೋರಿದ ಗಣ್ಯರು
ಬೆಂಗಳೂರು; ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು 73ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೋದಿ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಿರುವ ಬಿಜೆಪಿ, ಇಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ದಿನವನ್ನು ಜನಸ್ನೇಹಿ ಕಾರ್ಯಕ್ರಮವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುವುದು ಎಂದು ಬಿಜೆಪಿ ಹೇಳಿದೆ.
ಹಲವು ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಾಡು ಮಾಡಲಾಗುತ್ತಿದೆ. ನಮೀಬಿಯಾದಿಂದ ತರಲಾಗುತ್ತಿರುವ ಎಂಟು ಚಿರತೆಗಳನ್ನು ಮೋದಿ ಅವರು ಇಂದು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಹಸ್ತಾಂತರಿಸಲಿದ್ದಾರೆ. ಈ ಮಧ್ಯೆ ಹಲವು ನಾಯಕರು, ರಾಜ್ಯದ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
ʻಧೀಮಂತ ನಾಯಕ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಡಿನ ಜನತೆಯ ಪರವಾಗಿ ಜನ್ಮದಿನದ ಶುಭಾಶಯಗಳು. ಆಯುಷ್ಯ, ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ʻನಮ್ಮ ಪ್ರೀತಿಯ ನಾಯಕ ಮತ್ತು ಪ್ರಧಾನಮಂತ್ರಿ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ನಾಯಕತ್ವ, ಬದ್ಧತೆ ಮತ್ತು ದೂರದೃಷ್ಟಿ ರಾಷ್ಟ್ರಕ್ಕೆ ಸ್ಫೂರ್ತಿ. ನಿಮ್ಮ ಉತ್ತಮ ಆರೋಗ್ಯ ಮತ್ತು ರಾಷ್ಟ್ರವನ್ನು ಮುನ್ನಡೆಸುವಲ್ಲಿ ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆʼ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ʻ12 ವರ್ಷ ಮುಖ್ಯಮಂತ್ರಿಯಾಗಿ, 8 ವರ್ಷ ಪ್ರಧಾನಿಯಾಗಿ ದಣಿವರಿಯದೇ ದೇಶವನ್ನು ಮುನ್ನಡೆಸುತ್ತಿರುವ ನೆಚ್ಚಿನ ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳುʼ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.