National

ಮಾರ್ಚ್‌ 29ರಂದು ತಿರುಮಲದಲ್ಲಿ ವಿರಾಮ ದರ್ಶನಕ್ಕೆ ಬ್ರೇಕ್:‌ 12ಗಂಟೆ ಬಳಿಕ ಸರ್ವದರ್ಶನಕ್ಕೆ ಅವಕಾಶ

ತಿರುಪತಿ: ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಎಪ್ರಿಲ್ 2 ರಂದು ಮಂಗಳಕರ ಸಂವತ್ಸರದ ಯುಗಾದಿ ಆಚರಣೆ  ಹಿನ್ನಲೆಯಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನವು ಮಾರ್ಚ್ 29 ರಂದು ಮಂಗಳವಾರ ನಡೆಯಲಿದೆ. ಈ ಸಂದರ್ಭದಲ್ಲಿ ಟಿಟಿಡಿ ಆ ದಿನದ ವಿರಾಮ ದರ್ಶನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಮಾ.28ರ ಸೋಮವಾರ ಯಾವುದೇ ಶಿಫಾರಸ್ಸು ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ಟಿಟಿಡಿ ತಿಳಿಸಿದ್ದು, ಭಕ್ತರು ಈ ಬಗ್ಗೆ ಗಮನಹರಿಸಿ ಟಿಟಿಡಿಗೆ ಸಹಕರಿಸುವಂತೆ ಕೋರಲಾಗಿದೆ. ವರ್ಷಕ್ಕೆ ನಾಲ್ಕು ಬಾರಿ ಕೋಯಿಲ್ ಆಳ್ವಾರ್ ತಿರುಮಂಜನವನ್ನು ನಡೆಸುವುದು ವಾಡಿಕೆ. ಯುಗಾದಿ, ಅಣಿವಾರ ಆಸ್ಥಾನ, ಬ್ರಹ್ಮೋತ್ಸವ ಮತ್ತು ವೈಕುಂಠ ಏಕಾದಶಿ ಹಬ್ಬದ ಮುನ್ನ ಮಂಗಳವಾರ ದೇವಸ್ಥಾನದ ಶುದ್ಧೀಕರಣ ಕಾರ್ಯಕ್ರಮ ನಡೆಯುತ್ತದೆ.

ಕೋಯಿಲ್ ಆಳ್ವಾರ್ ತಿರುಮಂಜನದ ದಿನದಂದು ಅರ್ಚಕರು ಬೆಳಿಗ್ಗೆ 6 ರಿಂದ 11 ರವರೆಗೆ ದೇವಾಲಯದ ಶುದ್ಧೀಕರಣವನ್ನು ಮಾಡುತ್ತಾರೆ. ದೇವಸ್ಥಾನದಲ್ಲಿರುವ ಆನಂದನಿಲಯದಿಂದ ಬಂಗಾರದ ಬಾಗಿಲಿನವರೆಗೆ ಶ್ರೀವಾರಿ ದೇವಸ್ಥಾನ, ಉಪ ದೇವಸ್ಥಾನಗಳು, ದೇವಸ್ಥಾನದ ಆವರಣ, ಗೋಡೆಗಳು, ಛಾವಣಿ, ಇತ್ಯಾದಿ ಒಳಗಿನ ಎಲ್ಲಾ ವಸ್ತುಗಳನ್ನು ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ.

ಈ ಹಂತದಲ್ಲಿ ಸ್ವಾಮಿಯ ವಿಗ್ರಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಲಾಗುತ್ತದೆ. ಶುದ್ಧೀಕರಣದ ನಂತರ, ನಾಮಕೋಪು, ಶ್ರೀ ಚೂರ್ಣಂ, ಕಸ್ತೂರಿ ಹಳದಿ, ಅರಿಶಿನ, ಕರ್ಪೂರ, ಶ್ರೀಗಂಧದ ಪುಡಿ, ಕುಂಕುಮ, ಮುಂತಾದವುಗಳಿಂದ ಕೂಡದ ಸುಗಂಧಭರಿತ ನೀರನ್ನು ದೇವಾಲಯದಾದ್ಯಂತ ಪ್ರೋಕ್ಷಣೆ ಮಾಡಲಾಗುತ್ತದೆ. ಬಳಿಕ ಅರ್ಚಕರು ಸ್ವಾಮಿಯ ವಿಗ್ರಹದ ಮೇಲೆ ಹೊದಿಸಿದ ಬಟ್ಟೆ ತೆಗೆದು ವಿಶೇಷ ಪೂಜೆ, ನೈವೇದ್ಯ ನೆರವೇರಿಸುತ್ತಾರೆ. ಮಧ್ಯಾಹ್ನ 12ರಿಂದ ಸರ್ವದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ.

Share Post