ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಗೆದ್ದರೆ ಎಎಪಿ ರಾಜಕೀಯದಲ್ಲೇ ಇರಲ್ಲ; ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ದೊಡ್ಡದೊಂದು ಸವಾಲ್ ಹಾಕಿದ್ದಾರೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸಕಾಲಕ್ಕೆ ನಡೆಸಿ, ಅದ್ರಲ್ಲಿ ಬಿಜೆಪಿ ಗೆದ್ದರೆ ಆಮ್ ಆದ್ಮಿ ಪಕ್ಷ ರಾಜಕೀಯ ಬಿಡಲಿದೆ ಎಂದು ಹೇಳಿದ್ದಾರೆ.
ಎಂಸಿಡಿ ಚುನಾವಣೆ ಮುಂದೂಡುವುದರ ಹಿಂದಿನ ರಾಜಕೀಯ ದುರುದ್ದೇಶವನ್ನು ಪ್ರಶ್ನೆ ಮಾಡಿರುವ ಕೇಜ್ರಿವಾಲ್, ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ಅತಿ ಸಣ್ಣದಾದ ಎಎಪಿ ಪಕ್ಷದ ಬಗ್ಗೆ ಭಯ ಕಾಡುತ್ತಿದೆ. ಸಕಾಲಕ್ಕೆ ಚುನಾವಣೆ ನಡೆಸಲು ಬಿಜೆಪಿಗೆ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ಮುಂದೂಡಿರುವುದು ದೇಶದಿಂದ ಬ್ರಿಟಿಷರನ್ನು ತೊಲಗಿಸಿ ಪ್ರಜಾಪ್ರಭುತ್ವ ಸ್ಥಾಪಿಸಲು ತ್ಯಾಗ, ಬಲಿದಾನ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನ. ಇಂದು ಅವರು (ಬಿಜೆಪಿ) ಸೋಲಿನ ಭಯದಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಮುಂದೂಡುತ್ತಿದ್ದಾರೆ. ನಾಳೆ ಅವರು ರಾಜ್ಯಗಳ ಹಾಗೂ ದೇಶದ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಬಹುದು ಎಂದು ಎಚ್ಚರಿಸಿದ್ದಾರೆ. ಏತನ್ಮಧ್ಯೆ ದೆಹಲಿಯ ಮೂರು ಮಹಾನಗರ ಪಾಲಿಕೆ (ಪೂರ್ವ, ಉತ್ತರ, ದಕ್ಷಿಣ) ವಿಲೀನಗೊಳಿಸಲು ಏಕೀಕರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ.